ಮತೀಯ ರಾಜಕಾರಣದ ವಿರುದ್ಧ ಹೋರಾಡುತ್ತಿರುವ ಜಾತ್ಯತೀತ ಸಂಘಟನೆ ಡಿವೈಎಫ್ಐ‌: ಮುನೀರ್ ಕಾಟಿಪಳ್ಳ

Update: 2024-02-11 09:27 GMT

ಸುರತ್ಕಲ್,ಫೆ.11: ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆದುರಾಗಿ ಜಾತ್ಯತೀತ ಯುವ ಮನಸ್ಸುಗಳನ್ನು ಸಂಘಟಿಸಿ ನಿರಂತರ ಹೋರಾಡುತ್ತಿರುವ ದೇಶಪ್ರೇಮಿ ಯುವಜನ ಸಂಘಟನೆಯಾಗಿದೆ ಡಿವೈಎಫ್ಐ‌ ಎಂದು ಡಿವೈಎಫ್ಐ ನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಡಿವೈಎಫ್ಐ‌ ಇದರ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಯುಕ್ತ ಜಿಲ್ಲಾದ್ಯಂತ ನಡೆದ ಧ್ವಜ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ನಮ್ಮನ್ನಾಳುವ ಸರಕಾರಗಳ ತಪ್ಪಾದ ನೀತಿಗಳು,ಮತೀಯ ರಾಜಕಾರಣಕ್ಕೆ ಬಲಿಯಾಗುತ್ತಿರುವ ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ, ದಲಿತರ ಮತ್ತು ಜನಸಮಾನ್ಯರ ಮೇಲಾಗುವ ಅನ್ಯಾಯಕ್ಕೆದುರಾಗಿ ಡಿವೈಎಫ್ಐ‌ ಹೋರಾಡುತ್ತಾ ಬಂದಿದೆ. ಈ ಹಿಂದೆ ತುಳುನಾಡಿನ ಮಣ್ಣಿನಲ್ಲಿ ಗರಡಿಗಳ ಮೂಲಕ ಜನರನ್ನು ಸಂಘಟಿಸಿ ಭೂಮಿ ಹೋರಾಟ ನಡೆಸಿದ ಅವಳಿ ವೀರರಾದ ಕೋಟಿಚೆನ್ನಯ್ಯರಂತಹ, ಒಂದೇ ಜಾತಿ ಒಂದೇ ಮತ ಸಾರಿದ ನಾರಾಯಣಗುರುಗಳಂತಹ ವಿಚಾರಧಾರೆಯಡಿಯಲ್ಲಿ ಬಲಿಷ್ಠ ಚಳುವಳಿಯನ್ನು ಕಟ್ಟಲು ಡಿವೈಎಫ್ಐ ಸಂಘಟನೆ ಮುನ್ನಡೆಯುತ್ತಿದೆ ಎಂದರು. 

 ಡಿವೈಎಫ್ಐ‌ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ‌ ದಕ್ಷಿಣ ಜಿಲ್ಲೆಯಲ್ಲಿ ಸಂಘಟಿಸಿದ್ದು, ಈ ಸಮ್ಮೇಳನವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ನಾಗಮೋಹನ್ ದಾಸ್ ಉದ್ಘಾಟಿಸಲಿರುವರು. ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಎ.ಎ ರಹೀಮ್ ಉಪಸ್ಥಿತರಿರುವರು. ಬಹಿರಂಗ ಸಭೆಯಲ್ಲಿ ಸಿಪಿಐಎಂ ನ ಪ್ರಧಾನ ಕಾರ್ಯದರ್ಶಿ ಸೀತರಾಮ ಯೆಚೂರಿ, ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಭಾಗವಹಿಸಲಿರುವರು ಎಂದು ತಿಳಿಸಿದರು.

ಪ್ರತಿನಿಧಿ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಯುವಜನರ ಮುಂದಿರುವ ಸವಾಲುಗಳ ಬಗ್ಗೆ , ಮತೀಯ ರಾಜಕಾರಣಕ್ಕೆ ಬಲಿಯಾಗಿ ಘನತೆಯ ಬದುಕು ಕಳೆದುಕೊಳ್ಳುತ್ತಿರುವ ನಿರುದ್ಯೋಗಿ ಯುವಜನರ ಬಗ್ಗೆ ಈ ಸಮ್ಮೇಳನವು ಗಂಭೀರವಾದ ಚರ್ಚೆಗಳನ್ನು ನಡೆಸಿ,  ಮುಂದಿನ ದಿನಗಳಲ್ಲಿ ಅವುಗಳ ವಿರುದ್ಧ ಪ್ರಬಲ ಚಳುವಳಿಯ ಮಾರ್ಗೋಪಾಯಗಳನ್ನು ರೂಪಿಸಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ನಡೆದ ಧ್ವಜ ದಿನ ಕಾರ್ಯಕ್ರಮದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ರಿಝ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ವಿನುಶರಮಣ ಬೆಳ್ತಂಗಡಿ, ರಿಯಾಝ್ ಮೂಡಬಿದ್ರೆ, ಮಹಾಬಲ. ಟಿ ದೆಪ್ಪೆಲಿಮಾರ್, ರಝಾಕ್ ಮುಡಿಪು, ಮಾದುರಿ ಬೋಳಾರ, ಅದಿತಿ ಬೆಳ್ತಂಗಡಿ, ರಫೀಕ್ ಹರೇಕಳ, ರಾಜೇಶ್ ಉರ್ವಸ್ಟೋರ್, ಮನೋಜ್ ಕುಲಾಲ್, ದೀಪಕ್ ಬಜಾಲ್, ಧೀರಜ್ ಬಜಾಲ್, ನೌಶಾದ್ ಬೆಂಗರೆ, ಹನೀಫ್ ಬೆಂಗರೆ, ದಿನೇಶ್ ವಾಮಂಜೂರು, ಅಮೀರ್ ಉಳ್ಳಾಲ, ಭರತ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News