ತುಳು ಭಾಷಾ ಅಧ್ಯಯನಕ್ಕೆ ಪ್ರತ್ಯೇಕ ಕೇಂದ್ರ ಸ್ಥಾಪನೆ ಅಗತ್ಯ : ಡಾ. ದೇವರಕೊಂಡಾ ರೆಡ್ಡಿ

Update: 2023-10-26 14:00 GMT

ಮಂಗಳೂರು: ಕೊಂಕಣಿ ಭಾಷೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಪೂರಕವಾಗುವ ಭಾಷಾ ಕೇಂದ್ರವಿದೆ. ಆದರೆ, ತುಳುನಾಡಿನಲ್ಲಿ ತುಳುವಿಗೆ ಬೇಕಾಗಿರುವ ತುಳು ಭಾಷಾ ಕೇಂದ್ರ ಇಲ್ಲದಿರುವುದು ಆಶ್ಚರ್ಯ ತಂದಿದೆ. ತುಳು ಭಾಷಾ ಅಧ್ಯಯನಕ್ಕೆ ಪ್ರತ್ಯೇಕ ಭಾಷಾ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ತಿಳಿಸಿದ್ದಾರೆ.

ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ತುಳು ಪರಿಷತ್ ಮಂಗಳೂರು, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ರೋಶನಿ ನಿಲಯದ ಕನ್ನಡ ಸಂಘ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಯ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಗುರುವಾರ ಆಯೋಜಿಸಲಾದ ‘ನೆಲಮೂಲದ ನಡೆ: ಶೋಧ-ಸ್ವಾದ’ ಎಂಬ ರಾಜ್ಯ ಮಟ್ಟದ ವಿಚಾರಗೋಷ್ಠಿ ಹಾಗೂ ಡಾ.ಇಂದಿರಾ ಹೆಗ್ಗಡೆ ಅವರು ಬರೆದ ‘ಅತಿಕಾರೆ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ತುಳುನಾಡಿನ ಸಮಗ್ರ ಅಸ್ಮಿತೆಯ ಅವಲೋಕನಕ್ಕಾಗಿ ಎಲ್ಲಾ ಜಾತಿ, ಧರ್ಮದವರನ್ನು ಇದರಲ್ಲಿ ಸೇರಿಸಬೇಕಾಗಿದೆ. ತುಳುನಾಡಿನಲ್ಲಿ ಇವತ್ತು ಇರುವ ಆಚರಣೆ ನಾಳೆಗೆ ಮರೆಯಾಗುತ್ತಿರುವ ಇಂತಹ ಕಾಲದಲ್ಲಿ ತುಳುನಾಡಿನ ಸಂರಚನೆಯ ಆಳ ಅಗಲವನ್ನು ಭವಿಷ್ಯಕ್ಕೆ ಕಾಪಾಡುವ ಉದ್ದೇಶದಿಂದ ಭಾಷಾ ಕೇಂದ್ರ ಅನಿವಾರ್ಯ ಎಂದರು.

ಮಂಜೇಶ್ವರ ಗೋವಿಂದ ಪೈ ಅದಿಯಾಗಿ ತುಳುನಾಡಿನ ಬಗ್ಗೆ ಹಲವು ಅಗ್ರಗಣ್ಯರು ವಿಸ್ತೃತವಾಗಿ ಅಧ್ಯಯನ ಮಾಡಿದ್ದಾರೆ. ಈ ಪಂಕ್ತಿಯಲ್ಲಿ ಡಾ.ಇಂದಿರಾ ಹೆಗ್ಗಡೆ ಅವರು ಕೂಡ ತುಳುನಾಡಿನ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನ ವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ ಎಂದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ.ಜ್ಯೋತಿ ಚೇಳ್ಯಾರು ಪುಸ್ತಕದ ಕುರಿತಂತೆ ಮಾಹಿತಿ ನೀಡಿದರು.

ರೋಶನಿ ನಿಲಯದ ರಿಜಿಸ್ಟ್ರಾರ್ ಪ್ರೊ.ವಿನುತಾ ಕೆ , ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು.

ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ಪಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಕಲ್ಲೂರು ನಾಗೇಶ ವಂದಿಸಿದರು. ಲೇಖಕಿ ಡಾ.ಸುಲತ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News