ಕೋಡಿ ಬೆಂಗ್ರೆಯಲ್ಲಿ ನಡೆದ ಗಲಾಟೆಯ ಬಗ್ಗೆ ವಾಟ್ಸಪ್ ನಲ್ಲಿ ಸುಳ್ಳು ಸುದ್ದಿ: ಪೊಲೀಸ್ ಆಯುಕ್ತರ ಸ್ಪಷ್ಟನೆ
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಕಟ್ಟೆ, ತಣ್ಣೀರುಬಾವಿ ಎಂಬಲ್ಲಿ ರವಿವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಾಟ್ಸಪ್ ನಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಮಂಗಳೂರು ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಘಟನೆಯ ವಿವರ : ರವಿವಾರ ರಾತ್ರಿ 11:45 ಗಂಟೆಗೆ ಯುವಕರಾದ ವೆಂಕಟೇಶ, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೇದುತ್ತಿರುವ ಸಂಧರ್ಭ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸ್ಥಳಕ್ಕೆ ಬಂದು ಸಿಗರ್ ಲೈಟರ್ ಕೇಳಿದ್ದು, ಪ್ರಜ್ವಲ್ ಸಿಗರ್ ಲೈಟರನ್ನು ಪ್ರೀತಂ ಹಾಗೂ ಇತರರಿಗೆ ನೀಡಿದ್ದಾರೆ. ಸಿಗರ್ ಲೈಟರ್ ವಾಪಾಸು ಕೇಳಿದಾಗ 'ನೀವು ಯಾಕೆ ಧಮ್ಕಿ ಹಾಕುತ್ತೀರಿ ' ಎಂದು ಹೇಳಿ ಸನ್ವೀತ್ ತಂಡದವರಲ್ಲೊಬ್ಬ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದು, ಇತರರು ಮರದ ಕೋಲುಗಳಿಂದ ಪ್ರಜ್ವಲ್ ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಎಂಬವರಿಗೆ ಹಲ್ಲೆ ನಡೆಸಿದಾಗ , ಅವರೊಳಗೆ ಪರಸ್ಪರ ಗಲಾಟೆ ನಡೆದಿರುತ್ತದೆ. ಈ ಘಟನೆಯ ಪರಸ್ಪರ ಹಲ್ಲೆ ಕುರಿತು ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ. ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರೀತಂ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 03/2025 ಕಲಂ: 118(1), 126(2), 189(2), 189(4), 190, 191(2), 191(3),352) ಬಿ. ಎನ್.ಎಸ್ ನಂತೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಆರೋಪಿಗಳಾಗಿದ್ದು , ಇವರಲ್ಲಿ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಪ್ರಜ್ವಲ್ ಎಂಬಾತನು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 04/2025 ಕಲಂ: 189(2), 189(4) , 191(2), 191(3), 118(1), 190 ಬಿ. ಎನ್.ಎಸ್ ನಂತೆ ದಾಖಲಾಗಿದ್ದು ಈ ಪ್ರಕರಣದಲ್ಲಿ ಪ್ರೀತಂಮತ್ತು ಸನ್ವೀತ್ ಹಾಗೂ ಇತರರು ಆರೋಪಿಗಳಾಗಿರುತ್ತಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಾಟ್ಸಪ್ ನಲ್ಲಿ ಬೆಂಗ್ರೆ ಪರಿಸರದಲ್ಲಿ “ಹಿಂದೂಗಳ ಮನೆಯನ್ನು ಗುರಿಯಾಗಿಸಿಕೊಂಡು ತಲವಾರು ಸಹಿತ ನುಗ್ಗಿದ ಮುಸ್ಲಿಮ್ ಯುವಕರು" "ಸುಮಾರು ಹತ್ತು ಮಂದಿಯಿದ್ದ ಮುಸ್ಲಿಮ್ ಯುವಕರ ತಂಡದಿಂದ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದಾಳಿ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಒಬ್ಬನನ್ನು ಸೆರೆ ಹಿಡಿದ ಹಿಂದೂಗಳು" "ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಹಿಂದೂಗಳು, ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಆಗಮಿಸುವಂತೆ ಬಿಗಿಪಟ್ಟು ಹಿಡಿದ ಹಿಂದೂ ಸಮುದಾಯ” ಎಂಬುದಾಗಿ ಸುದ್ದಿಯನ್ನು ಹರಿಬಿಡಲಾಗಿರುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ಡಿ.ಸಿ.ಪಿಯವರಾದ ಸಿದ್ದಾರ್ಥ್ ಗೋಯಲ್ (ಕಾ&ಸು) ಮಂಗಳೂರು ನಗರ ಹಾಗೂ ಎ.ಸಿ.ಪಿ, ಸಿ.ಸಿ.ಬಿ, ಎ.ಸಿ.ಪಿ ಉತ್ತರ ಉಪ ವಿಭಾಗ, ಪೊಲೀಸ್ ನಿರೀಕ್ಷಕರು ಪಣಂಬೂರು ರವರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಮೇಲಿನ ವಾಟ್ಸಪ್ ನಲ್ಲಿ ಬಂದ ವಿಚಾರವು ಸುಳ್ಳು ಸುದ್ದಿಯಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.