ಬೆಳ್ತಂಗಡಿ: ನಿರ್ಮಾಣ ಹಂತದ ಮನೆ ತೆರವಿಗೆ ಮತ್ತೊಮ್ಮೆ ಮುಂದಾದ ಅರಣ್ಯ ಇಲಾಖೆ: ಶಾಸಕರ ನೇತೃತ್ವದಲ್ಲಿ ತಡೆ

Update: 2023-10-09 04:53 GMT

ಬೆಳ್ತಂಗಡಿ, ಅ.9: ಕಳೆಂಜ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ಮನೆ ಅರಣ್ಯ ಜಾಗದಲ್ಲಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ಅದನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ವಿಷಯ ತಿಳಿದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಆಗಮಿಸಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಬಾರಿ ಈ ಮನೆ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ.

ಕಳೆಂಜ ಗ್ರಾಮದ ಅಮ್ಮಿಡ್ಕಿ ಕುದ್ದಮನೆ ಸೇಸ ಗೌಡ ಹಾಗೂ ಕುಟುಂಬಸ್ಥರು ಈ ಜಮೀನಿನಲ್ಲಿ ಈ ಹಿಂದಿನಿಂದಲೂ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಜಾಗದಲ್ಲಿ ಇದೀಗ ಅವರ ಕುಟುಂಬಸ್ಥರು ಹೊಸದಾಗಿ ಮನೆ ನಿರ್ಮಿಸಲು ಮುಂದಾಗಿದ್ದರು. ಮನೆ ಪಂಚಾಂಗದ ಕೆಲಸ ಆರಂಭಿಸಿದ್ದರು. ಈ ನಡುವೆ ಕಳೆದ ವಾರ ಅರಣ್ಯ ಇಲಾಖೆಯವರು ಈ ಜಮೀನು 309 ಸರ್ವೇ ನಂಬರ್ ನಲ್ಲಿದ್ದು ಇದು ಅರಣ್ಯ ಇಲಾಖೆಯ ಜಾಗ ಎಂದು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಹರೀಶ್ ಪೂಂಜಾ ಭೇಟಿ ತೆರವು ಕಾರ್ಯಾಚರಣೆಯನ್ನು ತಡೆ ಹಿಡಿದಿದ್ದರು.

ಆದರೆ ಇಂದು ಬೆಳಗ್ಗೆ ಅರಣ್ಯ ಇಲಾಖೆಯವರು ಮತ್ತೆ ಈ ಅಕ್ರಮ ಕಟ್ಟಡ ತೆರವಿಗೆ ಮುಂದಾಗಿದ್ದರು ಇದರ ಮಾಹಿತಿ ತಿಳಿದು ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಯನ್ನು ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸ್ಥಿತಿ ಎದುರಾಗಿತ್ತು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಕೆ.ಎಸ್.ಆರ್.ಪಿ.ಯ ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಸದ್ಯ ಶಾಸಕರುಗಳ ತಂಡ ತಾತ್ಕಾಲಿಕ ಶೆಡ್ ಮುಂದೆಯೇ ಕುಳಿತಿದ್ದು, ಯಾವುದೇ ಕಾರಣಕ್ಕೂ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News