ಗ್ಯಾರಂಟಿ ಯೋಜನೆ ನಿಲ್ಲದು, ಸಿಗದವರಿಗೆ ಹುಡುಕಿ ಕೊಡಲು ಸಮಿತಿ ರಚನೆ: ಐವನ್ ಡಿಸೋಜ
ಮಂಗಳೂರು, ಜೂ.8: ಗ್ಯಾರಂಟಿ ಯೋಜನೆ ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿರುವ ಬದ್ಧತೆ. ಅದನ್ನು ಬಿಜೆಪಿ ಆರೋಪಿಸುತ್ತಿರುವಂತೆ ಯಾವುದೇ ಕಾರಣಕ್ಕೂ ನಿಲ್ಲಿಸಲಾಗದು. ಬದಲಿಗೆ ಈವರೆಗೂ ಗ್ಯಾರಂಟಿ ಯೋಜನೆಗಳು ಸಿಗದವರನ್ನು ಹುಡುಕಿ ಕೊಡುವ ನಿಟ್ಟಿನಲ್ಲಿ ಸಮಿತಿ ರಚನೆಯಾಗಿದ್ದು, ದ.ಕ. ಜಿಲ್ಲಾ ಪಂಚಾಯತ್ನಲ್ಲಿ ಕಚೇರಿ ತೆರೆದು ಕ್ರಮ ವಹಿಸಲಾಗುವುದು ಎಂದು ವಿಧಾನ ಪರಿಷತ್ನ ನೂತನ ಸದಸ್ಯ ಐವನ್ ಡಿಸೋಜಾ ಸ್ಪಷ್ಟಪಡಿಸಿದ್ದಾರೆ.
ಎರಡನೆ ಬಾರಿಗೆ ವಿಧಾನ ಪರಿಷತ್ ನ ಸದಸ್ಯತ್ವ ಪಡೆದ ಐವನ್ ಡಿಸೋಜಾ ಮಂಗಳೂರಿಗೆ ಭೇಟಿ ನೀಡಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರಕಾರ ನಿಲ್ಲಿಸಲಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಅಶೋಕ್ರವರು ಈ ಬಗ್ಗೆ ಮಾತನಾಡುವ ಬದಲು ಚಾರ್ ಸೌ ಪಾರ್ ಎಂದವರಿಗೆ ಯಾಕೆ ಬಹುಮತ ಬಂದಿಲ್ಲ ಅದರ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ ಲೋಕಸಭೆಯಲ್ಲಿ 13ರಿಂದ 18 ಸ್ಥಾನದ ನಿರೀಕ್ಷೆ ಇತ್ತು. ಅದು ಸಿಗದ ಬಗ್ಗೆ ಬೇಸರವಿದೆ. ಆದರೆ ಕಳೆದ ಅವಧಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದೇವೆ. ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ನೈರುತ್ಯ ಕ್ಷೇತ್ರದಲ್ಲಿಯೂ ಸೋಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಈ ಹಿನ್ನೆಡೆಗೆ ಕಾರಣ ಹುಡುಕಿ ಜನರ ಮನ ಗೆಲ್ಲುವ ಕೆಲಸ ತಕ್ಷಣದಿಂದಲೇ ಮಾಡಲಿದ್ದೇವೆ. ಮುಂಬರುವ ಜಿ.ಪಂ., ತಾಪಂ ಹಾಗೂ ಮನಪಾ ಚುನಾವಣೆಗಳಲ್ಲಿ ಗೆಲುವಿಗೆ ತುರ್ತು ಗಮನ ಹರಿಸಲಿದ್ದೇವೆ ಎಂದರು.
ಮುಂದೆ ಸಚಿವರಾಗುವ ಸಾಧ್ಯತೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ, ಜಿಲ್ಲೆಗೆ ಈಗಾಗಲೇ ವಿಧಾನಸಭೆ ಸ್ಪೀಕರ್ ಹುದ್ದೆ ಹಾಗೂ ಉಸ್ತುವಾರಿ ಸಚಿವರನ್ನು ನೀಡಲಾಗಿದೆ. ಪಕ್ಷದ ಕೆಲಸ ಮಾಡುವುದು ನನ್ನ ಕರ್ತವ್ಯ. ದೇಶ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಸುಭದ್ರವಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತನಾಗಿ ನನ್ನ ಕರ್ತವ್ಯ ಮುಂದುವರಿಸಲಿದ್ದೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಅಶ್ರಫ್, ಮನುರಾಜ್, ಶುಬೋದಯ ಆಳ್ವ, ಕೋಡಿಜಾಲ್ ಇಬ್ರಾಹೀಂ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಟಿ.ಎಂ. ಶಾಹಿದ್ ಮೊದಲಾದವರು ಉಪಸ್ಥಿತರಿದ್ದರು.
ಎನ್ ಡಿಎ ನೇತೃತ್ವ ವಹಿಸುವ ನೈತಿಕತೆ ಬಿಜೆಪಿಗಿಲ್ಲ
400ಕ್ಕೂ ಅಧಿಕ ಸ್ಥಾನಪಡೆಯುವುದಾಗಿ ಹೇಳಿ ಚುನಾವಣೆಗಿಳಿದಿದ್ದ ಬಿಜೆಪಿ ಕಳೆದ ಸಲ ಗಳಿಸಿದ ಸ್ಥಾನಕ್ಕಿಂತಲೂ ಕಡಿಮೆ ಗಳಿಸಿದೆ. 13 ರಾಜ್ಯಗಳಲ್ಲಿ ಖಾತೆಯನ್ನೇ ತೆರಲು ಸಾಧ್ಯವಾಗಿಲ್ಲ. ಬಿಜೆಪಿಯ ಭದ್ರಕೋಟೆಯಲ್ಲೇ ಜನತೆ ತಿರಸ್ಕರಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ 5 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದ ನರೇಂದ್ರ ಮೋದಿಯವರ ಜಯದ ಅಂತರ 1.5 ಲಕ್ಷಕ್ಕೆ ಇಳಿಕೆಯಾಗಿದೆ. ವಿಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳ ಮೂಲಕ ದಾಳಿ ನಡೆಸಿ ಚುನಾವಣೆಗಿಳಿದಿದ್ದ ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಕಳೆದ 10 ವರ್ಷದ ನರೇಂದ್ರ ಮೋದಿನ ನೇತೃತ್ವದ ಬಿಜೆಪಿನೀತಿ, ಅವರ ಹೇಳಿಕೆಗಳಿಂದ ಇದೀಗ ಬಿಜೆಪಿಗೆ ಎನ್ಡಿಎ ನೇತೃತ್ವ ವಹಿಸುವ ನೈತಿಕತೆ ಉಳಿದಿಲ್ಲ ಎಂದು ಐವನ್ ಡಿಸೋಜಾ ಹೇಳಿದರು.
ಹಿಂದಿನ ಅವಧಿಯಲ್ಲಿ ಎನ್ ಡಿಎಯ ಭಾಗವಾಗಿದ್ದ ಮೈತ್ರಿ ಪಕ್ಷಗಳನ್ನು ತಲೆ ಎತ್ತಿಯೂ ನೋಡದ ನರೇಂದ್ರ ಮೋದಿಯವರು ಇಂದು ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ಹಿಡಿದು ಎಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಐವನ್ ಡಿಸೋಜಾ ವ್ಯಂಗ್ಯವಾಡಿದರು.