ಹಜ್ ಯಾತ್ರೆ-2025: ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟ

Update: 2024-10-07 17:44 GMT

ಮಂಗಳೂರು: ಭಾರತೀಯ ಹಜ್ ಕಮಿಟಿ ಮೂಲಕ 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳಲು ರಾಜ್ಯ ಹಜ್ ಸಮಿತಿ ಮೂಲಕ ಅರ್ಜಿ ಸಲ್ಲಿಸಿದವರ ಪೈಕಿ ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದೆ.

ಆಯ್ಕೆಯಾದ ಎಲ್ಲಾ ಯಾತ್ರಿಕರು ಆರಂಭದಲ್ಲಿ ಮುಂಗಡ ಹಜ್ ಮೊತ್ತ ರೂ.1,28,000, ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕ 300 ರೂ. ಮತ್ತು ಇತರ ವೆಚ್ಚಗಳಿಗೆ 2,000 ರೂ. ಸೇರಿದಂತೆ ಒಟ್ಟು 1,30,300 ರೂ.ಗಳನ್ನು 2024 ಅಕ್ಟೋಬರ್ 8 ರಿಂದ ಅ.21ರೊಳಗಾಗಿ ಪಾವತಿಸಬೇಕಾಗಿದೆ.

1,30,300 ರೂ. ಠೇವಣಿ ಪಾವತಿ ವಿವರವನ್ನು https://hajcommittee.gov.in ಅಥವಾ Suvidha App ಮೂಲಕ ಪಡೆಯಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಠೇವಣಿಯನ್ನು ಪಾವತಿಸಬಹುದಾಗಿದೆ.

ಆಯ್ಕೆಯಾದವರಿಗೆ ನೀಡಲಾಗಿರುವ ವೆಬ್‌ಸೈಟ್‌ನಲ್ಲಿ ಕವರ್ ನಂಬ್ರದೊಂದಿಗಿರುವ ಉಲ್ಲೇಖ ಸಂಖ್ಯೆಯನ್ನು ಬಳಸಿ ಕೊಂಡು ನಿರ್ದಿಷ್ಟಪಡಿಸಿದ ಬ್ಯಾಂಕ್‌ನ ಪೇ- ಇನ್- ಸ್ಲಿಪ್ ಮೂಲಕ ಭಾರತದ ಹಜ್ ಸಮಿತಿಯ ಖಾತೆಗೆ ಎಸ್‌ಬಿಐ ಅಥವಾ ಯುಬಿಐ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಮೊತ್ತವನ್ನು ಠೇವಣಿ ಮಾಡಬಹುದು.

ಸೌದಿ ಅರೇಬಿಯಾದಲ್ಲಿ ವಿಮಾನ ದರದ ಮೊತ್ತ ಮತ್ತು ಸೌದಿ ವೆಚ್ಚಗಳ ಗಳನ್ನು ಪರಿಗಣಿಸಿ ಇತರ ಕಂತುಗಳನ್ನು ನಿರ್ಧರಿಸಲಾಗುತ್ತದೆ ಮತ್ತು ಶೀಘ್ರದಲ್ಲೇ ತಿಳಿಸಲಾಗುವುದು. ಆಯಾ ಎಂಬಾರ್ಕೇಶನ್ ಪಾಯಿಂಟ್‌ಗಳಿಗಾಗಿ ಹಜ್-2025ರ ವೆಚ್ಚದ ವಿವರಗಳನ್ನು ವೆಬ್‌ಸೈಟ್ ಅಂದರೆ https://hajcommittee.gov.in ಮತ್ತು ಹಜ್ ಸುವಿಧಾ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ಅನನ್ಯ ಬ್ಯಾಂಕ್ ಉಲ್ಲೇಖ ಸಂಖ್ಯೆಯನ್ನು ಠೇವಣಿ ರಸೀದಿಯಲ್ಲಿ ನಮೂದಿಸಬೇಕು. ಮುಂಗಡ ಹಜ್ ಮೊತ್ತವನ್ನು ಠೇವಣಿ ಮಾಡಿದ ನಂತರ ತಾತ್ಕಾಲಿಕವಾಗಿ ಆಯ್ಕೆಯಾದ ಯಾತ್ರಿಕರು ಅ.23ರ ಒಳಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಸಂಬಂಧಪಟ್ಟ ರಾಜ್ಯ/ ಕೇಂದ್ರಡಾಳಿತ ಪ್ರದೇಶದ ಹಜ್ ಸಮಿತಿಗೆ ಸಲ್ಲಿಸಬೇಕು. ಸಲ್ಲಿಸಬೇಕಾದ ದಾಖಲೆಗಳ ವಿವರ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಯಾತ್ರಿಕರು ಮುಂಗಡ ಹಜ್ ಮೊತ್ತವನ್ನು ಠೇವಣಿ ಮಾಡಲು ಮತ್ತು ಸಂಬಂಧಪಟ್ಟ ರಾಜ್ಯ ಹಜ್ ಸಮಿತಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ನಿಗದಿತ ಕೊನೆಯ ದಿನಾಂಕವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹಜ್ ಕಮಿಟಿ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಯಾಖತ್ ಅಲಿ ಅಫಾಕಿ ಹಜ್‌ಗೆ ಸಂಬಂಧಿಸಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಅವನ್ನು ಪಾಲಿಸಲು ವಿಫಲವಾದರೆ ಅವರ ಹಜ್ ಅವಕಾಶ ರದ್ದಾಗಲಿದೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸಯ್ಯದ್ ಅಶ್ರಫ್ ತಂಙಳ್ ಆದೂರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News