ಕುಡುಪು ಗುಂಪು ಹತ್ಯೆ ಪ್ರಕರಣ; ಗೃಹ ಸಚಿವರ ಬೇಜಾವಾಬ್ದಾರಿಯುತ ಹೇಳಿಕೆ ನಾಚಿಕೆಗೇಡು: ಎಸ್ಸೆಸ್ಸೆಫ್

ಮಂಗಳೂರು: ನಗರದ ಹೊರವಲಯದ ಕುಡುಪು ಎಂಬಲ್ಲಿ ನಡೆದ ಅಮಾಯಕ ವ್ಯಕ್ತಿಯ ಮೇಲಿನ ಗುಂಪು ಹತ್ಯೆಯ ಬಗ್ಗೆ ಗೃಹ ಸಚಿವರು ನೀಡಿರುವ ಹೇಳಿಕೆ ಕುರಿತು ರಾಜ್ಯ ಎಸ್ಸೆಸ್ಸೆಫ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಸೆಸ್ಸೆಫ್, ಅಪರಿಚಿತ ವ್ಯಕ್ತಿಯನ್ನು ಗುಂಪೊಂದು ಅಮಾನುಷಿಕವಾಗಿ ಥಳಿಸಿ ಕೊಲೆ ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ದೊರಕುವ ಮೊದಲೇ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು, ಹಲ್ಲೆಗೊಳಗಾದ ವ್ಯಕ್ತಿಯು ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ ಕಾರಣ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದು ಅತ್ಯಂತ ನಾಚಿಕೆಗೇಡು ಎಂದು ಅಭಿಪ್ರಾಯಪಟ್ಟಿದೆ.
ಈಗಾಗಲೇ ನಾಡಿನಲ್ಲಿ ಧರ್ಮಾಂಧರು ಕಾನೂನು ಕೈಗೆತ್ತಿಕೊಂಡು ಜನರೆಡೆಯಲ್ಲಿ ಛಿದ್ರತೆಯ ವಿಷಬೀಜ ಬಿತ್ತುತ್ತಿದ್ದಾರೆ. ಈ ಮಧ್ಯೆ ಇನ್ನಷ್ಟು ಕೋಮುವಾದಕ್ಕೆ ಕುಮ್ಮಕ್ಕು ನೀಡುವ ಇಂತಹಾ ಹೇಳಿಕೆಗಳು ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಮಂತ್ರಿಗಳಿಗೆ ಶೋಭೆ ತರುವುದಿಲ್ಲ. ಆದ್ದರಿಂದ ಗೃಹ ಮಂತ್ರಿಗಳು ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನಾಡಿನ ಸೌಹಾರ್ದತೆಗೆ ಧಕ್ಕೆಯಾಗದಂತೆ ಹೇಳಿಕೆ ನೀಡಬೇಕಾಗಿದೆ ಎಂದು ಎಸ್ಸೆಸ್ಸೆಫ್ ಪ್ರಕಟಣೆಯಲ್ಲಿ ಆಗ್ರಹಿಸಿದೆ.