ಜಪ್ಪಿನಮೊಗರು ದೊಂಪದಬಲಿ ಗದ್ದೆ ಸಮೀಪ ಮನೆಗಳು ಜಲಾವೃತ

Update: 2024-06-26 10:03 GMT

ಮಂಗಳೂರು, ಜೂ.26:ನಗರದಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಜಪ್ಪಿನಮೊಗರು ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೊಂಪದ ಬಲಿ ಗದ್ದೆಯ ಸಮೀಪದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀಕು ನುಗ್ಗಿದ ಪ್ರಕರಣವೂ ನಡೆದಿದೆ.

ಹಿಂದೆ ಗದ್ದೆಗಳಿದ್ದ ಪ್ರದೇಶ ಪ್ರಸಕ್ತ ಲೇಔಟ್ ಆಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿನ ಮುಖ್ಯ ರಸ್ತೆಯೂ ಕಾಂಕ್ರೀಟೀಕರಣಗೊಳಿಸಲಾಗಿದ್ದು, ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯಾಗದೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳಿಗೆ ಈ ಹಿಂದೆ ಮಾಹಿತಿ ನೀಡಿದ್ದರೂ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನಾ ಸಭೆಗೆ ಮುಂದಾಗಿದ್ದರು. ಸ್ಥಳೀಯ ಮನಪಾ ಸದಸ್ಯೆ ವೀಣಾ ಮಂಗಳ ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವ ಬಗ್ಗೆ ಪಾಲಿಕೆ ಇಂಜಿನಿಯರ್‌ಗಳು ಹಾಗೂ ಪಾಲಿಕೆ ಸದಸ್ಯೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿಭಟನಾ ಸಭೆ ಕೈಬಿಟ್ಟಿದ್ದಾರೆ.

ಕಾಂಕ್ರೀಟ್ ರಸ್ತೆ ಕತ್ತರಿಸಿ ನೀರು ಹರಿಯಲು ವ್ಯವಸ್ಥೆ ?

ಕಾಂಕ್ರೀಟ್ ರಸ್ತೆಯನ್ನು ಅಗೆದು ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲು ಮನಪಾ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಜಪ್ಪಿನಮೊಗರು, ಬಜಾಲ್ ನಡುವೆ ಸಂಚರಿಸುವ ಬಸ್ ಸೇರಿದಂತೆ ಇತರ ವಾಹನಗಳಿಗೆ ಇದರಿಂದ ತೊಂದರೆಯಾಗಲಿದೆ. ಹಾಗಿದ್ದರೂ ಸಾರ್ವಜನಿಕರ ಸಹಕಾರ ಹಾಗೂ ಸ್ಥಳೀಯರ ಮನವೊಲಿಸಿ ಇಲ್ಲಿ ರಸ್ತೆ ಕತ್ತರಿಸಿ 15 ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ ಪ್ರತಿಕ್ರಿಯಿಸಿದ್ದಾರೆ.

ಮಳೆಗಾಲ ಪೂರ್ವಭಾವಿಯಾಗಿ ಸಭೆ ನಡೆಸಲಾಗುತ್ತದೆ. ಆದರೆ ಈ ರೀತಿ ಕಾಂಕ್ರೀಟ್ ರಸ್ತೆ ಕತ್ತರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತಾಗಬಾರದು. ರಸ್ತೆ ನಿರ್ಮಾಣಕ್ಕೆ ಮೊದಲೇ ಮಳೆ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆಯನ್ನು ರೂಪಿಸಿರಬೇಕು. ಸಂಬಂಧಪಟ್ಟ ಇಂಜಿನಿಯರ್‌ಗಳು, ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪಿನಮೊಗರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News