ಜನನಿಬಿಡ ಪ್ರದೇಶದಲ್ಲಿ ಬಿಜೆಪಿ ಪ್ರತಿಭಟನೆಗೆ ಅವಕಾಶ: ಮಂಗಳೂರು ಪೊಲೀಸ್ ಆಯುಕ್ತರ ಕ್ರಮಕ್ಕೆ ಜಿಲ್ಲಾ ಜಾತ್ಯತೀತ ಪಕ್ಷಗಳು-ಸಂಘಟನೆಗಳ ಜಂಟಿ ವೇದಿಕೆ ಟೀಕೆ
ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ, ಪ್ರತಿಭಟನೆಗಳನ್ನು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮಾತ್ರ ಮಾಡಲು ಅವಕಾಶ ಎನ್ನುವ ಮಾಡುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಇಂದು ಬಿಜೆಪಿ ಪಕ್ಷ, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಗರದ ಹೃದಯಭಾಗದ ಜನ ನಿಬಿಡ ಪಿವಿಎಸ್ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿದ್ದಾರೆ. ಏನಿದು ಕಮಿಷನರ್ ಅವರೇ? ಬಿಜೆಪಿಗೆ ಒಂದು ನ್ಯಾಯ, ಜನಪರ ಸಂಘಟನೆಗಳಿಗೆ ಒಂದು ನ್ಯಾಯವೇ ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಪ್ರಶ್ನಿಸಿದೆ.
"ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ, ಪ್ರತಿಭಟನೆಗಳನ್ನು ಮಿನಿ ವಿಧಾನ ಸೌಧದ ಮುಂಭಾಗ ಮಾತ್ರ ಮಾಡತಕ್ಕದ್ದು, ಅವರು (ಜನಪರ, ಜಾತ್ಯತೀತ ಸಂಘಟನೆಗಳು) ಅದನ್ನು ಮೀರಿ ಧರಣಿ ಮಾಡಲು ಅನುಮತಿ ಕೇಳಿದ್ದಕ್ಕೆ ಅನುಮತಿ ನಿರಾಕರಿಸಿದ್ದೇನೆ, ಧರಣಿ ನಡೆಸಿದ್ದಕ್ಕೆ FIR ಹಾಕಿದ್ದೇನೆ. ಇದು ಎಲ್ಲರಿಗೂ (ಬಿಜೆಪಿ ಸೇರಿ) ಅನ್ವಯ ಆಗುತ್ತದೆ" ಎಂದು ಸರಕಾರದ ಪ್ರಮುಖರ ಬಳಿ ಸುಳ್ಳು ಸಮಾಜಾಯಿಷಿ ನೀಡುತ್ತಾ ಬಂದ ಪೊಲೀಸ್ ಕಮಿಷನರ್ ಅಗ್ರವಾಲ್, ಇವತ್ತು ಬಿಜೆಪಿ ಪಕ್ಷ, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಗರದ ಹೃದಯಭಾಗದ ಜನ ನಿಬಿಡ ಪಿವಿಎಸ್ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಜಂಟಿ ವೇದಿಕೆ ಟೀಕಿಸಿದೆ.
ನಗರದ ಹೊರ ವಲಯದ 12 ಕಿ.ಮೀ. ದೂರದ ಕೂಳೂರಿನಲ್ಲಿ ವಾಹನ ಸಂಚಾರ ಇಲ್ಲದ ಸ್ಥಳದಲ್ಲಿ ಕೇಂದ್ರ ಸರಕಾರದ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ, ಬಿಜೆಪಿ ಶಾಸಕ, ಸಂಸದರ ವೈಫಲ್ಯದ ವಿರುದ್ಧ ಧ್ವನಿವರ್ಧಕ ಇಲ್ಲದೆ ಶಾಂತಿಯುತ ಧರಣಿ ನಡೆಸುವುದು ಅಗ್ರವಾಲ್ ಪ್ರಕಾರ ಅಪರಾಧ, ಅದಕ್ಕಾಗಿ ನೋಟಿಸ್ ಜಾರಿ, ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮನೆಗೆ ಪೊಲೀಸರ ಭೇಟಿ, ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಭೀತಿ ಹುಟ್ಟಿಸುವುದು.... ಅದೇ ಬಿಜೆಪಿ ಶಾಸಕರುಗಳು ರಾಜ್ಯ ಸರಕಾರದ ವಿರುದ್ಧ ನಗರದ ಹೃದಯ ಭಾಗದ, ವಾಹನ ದಟ್ಟಣೆಯ ಪಿವಿಎಸ್ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಸುವುದು ನಿಯಮಬದ್ಧ !, ಬಿಜೆಪಿ, ಪರಿವಾರಕ್ಕೆ ಮಿನಿ ವಿಧಾನ ಸೌಧದ ಮುಂಭಾಗದಲ್ಲೆ ಧರಣಿ ನಡೆಸಬೇಕು ಎಂಬ ನಿಯಮ ಇಲ್ಲ. ಅವರಿಗೆ ಇಷ್ಟ ಬಂದಲ್ಲಿ ನಡೆಸಬಹುದು
ಕಮಿಷನರ್ ಅಗ್ರವಾಲ್ ಬಿಜೆಪಿ ಪಕ್ಷ, ಶಾಸಕರುಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪರ ಚಳವಳಿಗಳು, ಜಾತ್ಯತೀತ ಸಂಘಟನೆಗಳ ವಿರುದ್ಧ ಇದ್ದಾರೆ, ದಮನಿಸುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಪ್ರಶ್ನಿಸಿದೆ.
ಸರ್ವಾಧಿಕಾರಿ, ಜನ ವಿರೋಧಿ ಪೊಲೀಸ್ ಕಮೀಷನರ್ ಅಗ್ರವಾಲ್ ವರ್ಗಾವಣೆ ಆಗಲೆ ಬೇಕು, ಅವರ ಮೇಲಿನ ಆರೋಪಗಳ ಕುರಿತು ತನಿಖೆಗೆ ನಡೆಯಲೇಬೇಕು ಎಂದು ವೇದಿಕೆ ಪ್ರಕಟನೆಯಲ್ಲಿ ಆಗ್ರಹಿಸಿದೆ.