ಕಲ್ಲಾಪು: ವಿಪರೀತ ಮಳೆಗೆ ಬಾವಿ ಕುಸಿತ; ಭೀತಿಯಲ್ಲಿ ನಾಗರಿಕರು
ಉಳ್ಳಾಲ: ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಗೆ ತಾಲೂಕಿನ ಕಲ್ಲಾಪು ಬಳಿ ಕೆರೆ ಬೈಲ್ , ಸೇವಂತಿಗುಡ್ಡೆಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿರುವ ಬಾವಿಯೊಂದು ಕುಸಿದಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಕಲ್ಲಾಪು ಬಳಿ ಇಬ್ರಾಹಿಂ ಎಂಬವರ ಮಾಲೀಕತ್ವದ ಬಾಡಿಗೆ ಕಟ್ಟಡದಲ್ಲಿ ಐದು ಕುಟುಂಬಗಳು ವಾಸವಿದ್ದು, ಇವರ ಅನುಕೂಲಕ್ಕಾಗಿ ರಸ್ತೆ ಸಮೀಪದಲ್ಲೇ ಒಂದೇ ಬಾವಿ ಇದೆ. ಈ ಬಾವಿ ಗುರುವಾರ ಮುಂಜಾನೆ ಕುಸಿದು ಬಿದ್ದಿದೆ.
ಈ ಘಟನೆ ಹಿನ್ನೆಲೆಯಲ್ಲಿ, ಶಾಲಾ, ಕಾಲೇಜು ವಾಹನಗಳು ,ಘನ ವಾಹನಗಳು ಈ ರಸ್ತೆಯಾಗಿ ಸಂಚರಿಸಿದಂತೆ ಮುನ್ಸೂಚನೆ ನೀಡಲಾಗಿದೆ.
ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ಆಳ್ವ, ಇಂಜಿನಿಯರ್ ತುಳಸಿದಾಸ್, ರೆವೆನ್ಯೂ ಇನ್ಸ್ಪೆಕ್ಟರ್ ಚಂದ್ರ ಹಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ರಸ್ತೆ ಸಮೀಪದಲ್ಲೇ ಇರುವ ಒಂದು ಮನೆಯ ಕಾಂಪೌಂಡ್ ಕುಸಿಯುವ ಹಂತದಲ್ಲಿದ್ದು, ಕಾಂಪೌಂಡ್ ತೆರವುಗೊಳಿಸಲು ಮನೆ ಮಂದಿಗೆ ನಗರ ಸಭೆ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಈ ರಸ್ತೆಯಾಗಿ ತೆರಳಬಾರದಂತೆ ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬ ಬಾವಿಯ ಕಡೆ ಸುಳಿಯದಂತೆ ನಗರ ಸಭೆ ಸೂಚನೆ ನೀಡಿದೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಯೂಸುಫ್, ಇಸ್ಮಾಯಿಲ್ ಮೊಹಮ್ಮದ್ ಹಸನ್, ಲತೀಫ್, ಶರೀಫ್ ಉಪಸ್ಥಿತರಿದ್ದರು.
ಕುಡಿಯಲು ನೀರಿಲ್ಲ
ಒಂದು ವರ್ಷದ ಹಿಂದೆ ಬಾವಿಯ ರಿಂಗ್ ಕುಸಿದಿತ್ತು. ಈ ಬಾರಿ ಮೇಲಿನಿಂದ ಬಾವಿ ಕುಸಿದಿದೆ. ಇದರಿಂದ ಐದು ಕುಟುಂಬಗಳಿಗೆ ಕುಡಿಯಲು ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ನೀರಿನ ವ್ಯವಸ್ಥೆ ಮಾಡಬೇಕು. ಸಮೀಪದ ಮನೆಗೆ ನೀರಿಗೆ ಹೋದರೆ ನಿಮ್ಮ ಮಾಲೀಕರಿಗೆ ವ್ಯವಸ್ಥೆ ಮಾಡಲು ತಿಳಿಸಿ ಎನ್ನುತ್ತಾರೆ. ನಾವು ಮೂಲತಃ ಬಾಗಲಕೋಟೆ ನಿವಾಸಿ ಆಗಿದ್ದು ಕೂಲಿ ಕೆಲಸ ಮಾಡಿ ಬಾಡಿಗೆ ಮನೆಯಲ್ಲಿ ಬದುಕುವವರು. ನಮಗೆ ವ್ಯವಸ್ಥೆ ಮಾಡಿ ಎಂದು ಇದೇ ಕಟ್ಟಡ ದಲ್ಲಿ ವಾಸವಿರುವ ಬಾಗಲಕೋಟೆ ನಿವಾಸಿ ಮಹಾಂತೇಶ್ ಅಳಲು ತೋಡಿಕೊಂಡರು.
ಕುಟುಂಬ ಗಳ ಸ್ಥಳಾಂತರಕ್ಕೆ ಸೂಚನೆ
ಕಲ್ಲಾಪು ಬಾವಿ ಕುಸಿತಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಡಿಗೆ ಕಟ್ಟಡದಲ್ಲಿ ವಾಸವಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸಮೀಪದಲ್ಲೇ ಇರುವ ಕಾಂಪೌಂಡ್ ತೆರವಿಗೂ ಸಂಬಂಧ ಪಟ್ಟ ಕುಟುಂಬಕ್ಕೆ ತಿಳಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿ ವಾಸವಿರುವ ಕುಟುಂಬಗಳನ್ನು ಸ್ಥಳಾಂತರ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು
-ವಾಣಿ ಆಳ್ವ, ಪೌರಾಯುಕ್ತ, ಉಳ್ಳಾಲ ನಗರ ಸಭೆ