ಕಾಂತರಾಜು ಆಯೋಗದಿಂದ ಸಂವಿಧಾನ ವಿರೋಧಿ ಷಡ್ಯಂತ್ರ : ಪರಿಶಿಷ್ಟರ ಮಹಾ ಒಕ್ಕೂಟ

Update: 2025-04-16 13:29 IST
Photo of Press meet
  • whatsapp icon

ಮಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವ್ಯವಸ್ಥಿತ ಸಂಚು ನಡೆಸಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಈ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಬುಡಕಟ್ಟುಗಳು ಇವೆ ಎಂಬುದು ಕಾಂತರಾಜ್ ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಪತ್ರಿಕಾ ವರದಿಯಾಗಿದೆ. ಆದರೆ ಕರ್ನಾಟದಲ್ಲಿ 101 ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿಸಲ್ಪಟ್ಟಿವೆ. ಜಾತಿಗಳನ್ನು ಪತ್ತೆ ಮಾಡುವ ಅಧಿಕಾರ ಆಯೋಗಕ್ಕೆ ಇಲ್ಲ. ಜಾತಿಗಳನ್ನು ಅಧಿಸೂಚನೆಗೊಳಿಸುವ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇರುವುದು. ಹಾಗಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ಯಾವುದೇ ಜಾತಿಯೂ ಪರಿಶಿಷ್ಟ ಜಾತಿಯಾಗುವುದಿಲ್ಲ. ಈ ರೀತಿ ಜಾತಿ ಗುರುತಿಸುವುದು ಅಥವಾ ಪರಿಗಣಿಸುವುದು ಭಾರತದ ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಹಿಂದುಳಿದ ಅಥವಾ ಅತೀ ಹಿಂದುಳಿದ ಕೆಲವು ಜಾತಿಗಳು ಅಕ್ರಮ ದಾರಿ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿ ಸರ್ಟಿಫಿಕೇಟ್ ಪಡೆಯುವ ನಿಟ್ಟಿನಲ್ಲಿ ಆಯೋಗದ ಈ ನಡೆ ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಷಡ್ಯಂತ್ರ ಎಂದವರು ಹೇಳಿದರು.

ಪರಿಶಿಷ್ಟ ಬುಡಕಟ್ಟುಗಳಿಗೆ ಸಂಬಂಧಿಸಿ ಸಂವಿಧಾನದ ವಿಧಿ 342(1) ಮತ್ತು 342(2) ರಲ್ಲಿ ಇದೇ ರೀತಿಯ ನಿಯಮಗಳನ್ನು ಪ್ರಸ್ತಾವಿಸಲಾಗಿದೆ. ಪ್ರಸಕ್ತ ರಾಜ್ಯದಲ್ಲಿ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಯಲ್ಲಿ 49 ಜಾತಿಗಳು ಅಧಿಸೂಚನೆಗೊಂಡಿವೆ. ಕಾಂತರಾಜ್ ಆಯೋಗವು ರಾಜ್ಯದಲ್ಲಿ 105 ಪರಿಶಿಷ್ಟ ಬುಡಕಟ್ಟುಗಳನ್ನು ಪತ್ತೆ ಮಾಡಿದೆ ಎಂಬುದು ಪರಿಶಿಷ್ಟ ಬುಡಕಟ್ಟುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದು ನೈಜ ಬುಡಕಟ್ಟುಗಳಿಂದ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಭಾಗ. ಈ ವಿಷಯದಲ್ಲಿ ಅಗತ್ಯ ಬಿದ್ದರೆ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಲೋಲಾಕ್ಷ ಹೇಳಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಕಾಂತರಾಜ್ ವರದಿಯನ್ನು ಒಪ್ಪಿರುವುದಾಗಿ ಪ್ರಕಟಿಸಿರುವುದರಿಂದ ಸಂವಿಧಾನದ ಮೇಲೆ ಮತ್ತು ಪರಿಶಿಷ್ಟ ಬುಡಕಟ್ಟು ಸಮುದಾಯಗಳ ಸಂವಿಧಾನಿಕ ಹಕ್ಕುಗಳ ಮೇಲೆ ಕಾಂಗ್ರೆಸ್ ಸರಕಾರ ನಡೆಸಿದ ನಿರ್ಲಜ್ಜ ದಾಳಿ ಎಂದು ಪರಿಗಣಿಸಬೇಕಾಗಿದೆ ಎಂದು ಅವರು ಆರೋಪಿಸಿದರು.

ಎ.20ರಂದು ಒಳ ಮೀಸಲಾತಿ ಬಗ್ಗೆ ಸಮಾಲೋಚನೆ :

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ ಎ.20ರಂದು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ನಗರದ ಶ್ರೀನಿವಾಸ್ ಹೊಟೇಲ್‌ನಲ್ಲಿ ಬೆಳಗ್ಗೆ 10ಕ್ಕೆ ಸಭೆ ನಡೆಯಲಿದ್ದು, ವಿವಿಧ ಸಮುದಾಯಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಚಿಂತಕರು, ಸಾರ್ವಜನಿಕ ನೀತಿ ನಿರೂಪಕರು ಈ ಸಮಾಲೋಚನೆಯಲ್ಲಿ ಜಾತಿ ಮತ್ತು ಮೀಸಲಾತಿ ನೀತಿ ಬಗ್ಗೆ ಮಹತ್ವಪೂರ್ಣ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರು ತಿಳಿಸಿದರು.

ಗೋಷ್ಟಿಯಲ್ಲಿ ಜತೆ ಕಾರ್ಯದರ್ಶಿ ಪದ್ಮನಾಭ, ಉಪಾಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News