ಫೆ.20: ಕಾಸರಗೋಡು-ಪಾಲಡ್ಕ-ಕಡಂದಲೆ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ಹಕ್ಕೊತ್ತಾಯ ಜಾಥಾ

Update: 2025-02-17 23:26 IST
ಫೆ.20: ಕಾಸರಗೋಡು-ಪಾಲಡ್ಕ-ಕಡಂದಲೆ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ಹಕ್ಕೊತ್ತಾಯ ಜಾಥಾ
  • whatsapp icon

ಮಂಗಳೂರು: ಕಾಸರಗೋಡು 400 ಕೆವಿ ಮತ್ತು ಪಾಲಡ್ಕ-ಕಡಂದಲೆ 400/220 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಯನ್ನು ವಿರೋಧಿಸಿ ಫೆ.20ರಂದು ಬೆಳಗ್ಗೆ 9:30ಕ್ಕೆ ನಗರದ ಬಲ್ಮಠದಿಂದ ಮಿನಿ ವಿಧಾನಸೌಧದವರೆಗೆ ಹಕ್ಕೊತ್ತಾಯ ಜಾಥಾ ಮತ್ತು ಪೂ.11ಕ್ಕೆ ನಗರದ ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ತಿಳಿಸಿದೆ.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ನೇತೃತ್ವದ ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ) ಉಡುಪಿ, ರೈತ ಸಂಘ - ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ (ರಿ) ಕರ್ನಾಟಕ ಪ್ರದೇಶ, ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ, ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ -ಸಂಸ್ಥೆಗಳು ದ.ಕ., ಉಡುಪಿ, ಐಸಿವೈಎಂ ಮಂಗಳೂರು ಧರ್ಮ ಪ್ರಾಂತ ಮತ್ತು ಕಾಸರಗೋಡು ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ ನಡೆಯುವ ಈ ಜಾಥಾ ಮತ್ತು ಪ್ರತಿಭಟನೆಯಲ್ಲಿ ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೋರಾಟ ಸಮಿತಿಯ ಮುಖಂಡರಾದ ಪಾವ್ಲ್ ರೋಲ್ಫಿ ಡಿಕೋಸ್ತ, ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಯೋಜನೆ ಹೆಸರಿನಲ್ಲಿ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿ ಎಂದೇಳಿಕೊಳ್ಳುತ್ತಿರುವ ಸ್ಟೆರ್‌ಲೈಟ್ ಪವರ್ ಕಂಪನಿಯವರು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನು ನಡೆಸದೆ ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರಿಗೆ ಯಾವುದೇ ನೋಟಿಸ್ ನೀಡದೆ, ಭೂಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಫಲವತ್ತಾದ ಕೃಷಿ ಭೂಮಿ, ತೋಟಗಾರಿಕಾ ಬೆಳೆಗಳು, ಅಪರೂಪದ ಜಾತಿಯ ಮರಗಳನ್ನು ಒಳಗೊಂಡ ಸಂರಕ್ಷಿತ ಅರಣ್ಯ ಸಂಪತ್ತನ್ನು ಸರ್ವನಾಶಗೊಳಿಸುವ ಈ ಯೋಜನೆಗೆ ತೀವ್ರ ವಿರೋಧವಿದೆ. ಪರ್ಯಾಯವಾಗಿ ಸಮುದ್ರಮಾರ್ಗ, ಹೆದ್ದಾರಿ, ಸಾರ್ವಜನಿಕ ರಸ್ತೆ, ರೈಲ್ವೆ ಹಳಿ ಪಕ್ಕ, ಭೂಗತ ಮಾರ್ಗದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಕೂಡ ಉಭಯ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಹೋರಾಟ ಸಮಿತಿಯ ವಿಕ್ಟರ್ ಕಡಂದಲೆ, ಕೃಷ್ಣ ಪ್ರಸಾದ್ ತಂತ್ರಿ, ಶ್ರೀಧರ ಶೆಟ್ಟಿ, ಆಲ್ಫೋನ್ಸ್ ಉಪಸ್ಥಿತರಿದ್ದರು.

ಈ ಪ್ರಕೃತಿ ವಿರೋಧಿ ಯೋಜನೆಯಿಂದಾಗಲಿರುವ ಸಮಸ್ಯೆಗಳು

►ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರಿನಿಂದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ ಮೀ ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್‌ನ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್ ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಅವಕಾಶವಿಲ್ಲ. ಸುಮಾರು 3450ಕ್ಕೂ ಅಧಿಕ ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ.

►ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರಗಳನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳ ಮಾರಣ ಹೋಮವಾಗಲಿದೆ. ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾಗಲಿದೆ. ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ. ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿಧ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ. ಲಕ್ಷಾಂತರ ಸಂಖ್ಯೆಯ ಬಾಳೆ, ಪೇರಳೆ, ಸಪೋಟ ಮುಂತಾದ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ.

►ಸುಮಾರು 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, ಮತ್ತು 13 ಕ್ರೈಸ್ತ ಧರ್ಮದ ಇಗರ್ಜಿ-ಪ್ರಾರ್ಥನಾ ಮಂದಿರಗಳು ಈ ಯೋಜನಾ ಮಾರ್ಗಕ್ಕಾಗಿ ನೆಲಸಮವಾಗಲಿದೆ. ಜೊತೆಗೆ ಈ ಪ್ರಾಕೃತಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ಕೋಟ್ಯಂತರ ಪಶು-ಪಕ್ಷಿಗಳು, ಜಲಚರ ಜೀವಿಗಳು, ಜೀವ ವೈವಿಧ್ಯ ಸಂಕುಲಗಳು ಸರ್ವನಾಶವಾಗಲಿದೆ.

►ಇದರಿಂದ ಹರಿದಾಡಲಿರುವ ಬೃಹತ್ ಪ್ರಮಾಣದ ವಿದ್ಯುತ್ಶಕ್ತಿಯಿಂದ ಸೃಷ್ಟಿಯಾಗಲಿರುವ ವಿಕಿರಣ, ವಿದ್ಯುತ್ ಕಾಂತೀಯ ಅಲೆಗಳಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗಲಿರುವ ಕ್ಯಾನ್ಸರ್, ಬಂಜೆತನ ಮುಂತಾದ ಮಾರಣಾಂತಿಕಾ ಕಾಯಿಲೆ, ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಹಕ್ಕೊತ್ತಾಯಗಳು

►ಈಗಾಗಲೆ ಅಭಿವೃದ್ಧಿಗೊಂಡಿರುವ ಕೃಷಿಭೂಮಿ ಮತ್ತು ಸಮೃದ್ಧ ಕೃಷಿ ಸಂಪತ್ತು, ಅರಣ್ಯ ಸಂಪತ್ತು ನಾಶವಾಗುವುದನ್ನು ತಪ್ಪಿಸಬೇಕು. ಯೋಜನೆ ಅನಿವಾರ್ಯವಾಗಿದ್ದಲ್ಲಿ ಪರ್ಯಾಯ ಮಾರ್ಗದ ಮೂಲಕ ಅನುಷ್ಠಾನಗೊಳಿಸಬೇಕು.

►ಬ್ರಿಟಿಷರ ಕಾಲದ ಟೆಲಿಗ್ರಾಫ್ ಕಾಯ್ದೆ-1885ನ್ನು ಸಂಪೂರ್ಣ ರದ್ದುಗೊಳಿಸಿ, 2003ರ ಇಲೆಕ್ಟ್ರಿಸಿಟಿ ಕಾಯ್ದೆಯನ್ನು ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗಳಿಗೆ ಅನ್ವಯಗೊಳಿಸಬೇಕು.

►ಈ ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆದಾರ ಕಂಪೆನಿಗೆ ನೀಡಲಾದ ಏಕ ಸ್ವಾಮ್ಯ ಪರಮಾಧಿಕಾರವನ್ನು ರದ್ದುಪಡಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News