ಮಂಗಳೂರು: ಮೇ 2ರಿಂದ 4ರ ವರೆಗೆ ದಕ್ಷಿಣ ಏಷ್ಯಾ ಪ್ರಾದೇಶಿಕ ಚರ್ಮರೋಗ ಸಮ್ಮೇಳನ

ಮಂಗಳೂರು, ಎ.30: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಹಾಗೂ ಕುಷ್ಠ ರೋಗಿಗಳ ಸಂಘ (ಐಎಡಿವಿಎಲ್) ವು ಮೇ. 2ರಿಂದ 4ರವರೆಗೆ ಮಂಗಳೂರಿನಲ್ಲಿ 13ನೇ ದಕ್ಷಿಣ ಏಷ್ಯಾ ಪ್ರಾದೇಶಿಕ ಚರ್ಮ ರೋಗ ಸಮ್ಮೇಳನ ಆಯೋಜಿಸುತ್ತಿದೆ.
ಐಎಡಿವಿಎಲ್ನ ರಾಷ್ಟ್ರೀಯ ಹಾಗೂ ಕರ್ನಾಟಕ ಮತ್ತು ಕರಾವಳಿ ಶಾಖೆಯ ಸಹಯೋಗದೊಂದಿಗೆ ಪ್ರಾದೇಶಿಕ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಸಮ್ಮೇಳನ ಟಿಎಂಎಎ ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಎಸ್. ಪೈ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮೇ 2ರಂದು ಸಂಜೆ 6:30ಕ್ಕೆ ಸಮ್ಮೇಳನ ಉದ್ಘಾಟಿಸುವರು ಎಂದರು.
ಸಮ್ಮೇಳನದಲ್ಲಿ 1,200ಕ್ಕೂ ಅಧಿಕ ಚರ್ಮರೋಗ ತಜ್ಞರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. 600 ವೈಜ್ಞಾನಿಕ ಪ್ರಬಂಧಗಳು ಮಂಡನೆಯಾಗಲಿದ್ದು, ಸಮ್ಮೇಳನವು ಚರ್ಮರೋಗ ಲೇಸರ್ ಗಳು ಮತ್ತು ಶಸ್ತ್ರ ಚಿಕಿತ್ಸಾ ತಂತ್ರಗಳ ಇತ್ತೀಚಿನ ಪ್ರಗತಿ ಸೇರಿದಂತೆ ಆಧುನಿಕ ಅವಿಷ್ಕಾರಗಳನ್ನು ಪ್ರದರ್ಶಿಸಲಿದೆ. ದಕ್ಷಿಣ ಏಷ್ಯಾವನ್ನು ಬಾಧಿಸುವ ನಿರ್ಲಕ್ಷಿತ ಉಷ್ಣ ವಲಯದ ಕಾಯಿಲೆಗಳ ಮೇಲೆ ವಿಶೇಷ ಗಮನ ಸೆಳೆಯಲಾಗುವುದು ಎಂದು ಸಮ್ಮೇಳನ ಸಂಘಟನಾ ಸಮಿತಿಯ ಸಂಯೋಜಕ ಡಾ.ರಮೇಶ್ ಭಟ್ ಮಾಹಿತಿ ನೀಡಿದರು.
ಪುಸ್ತಕ ಬಿಡುಗಡೆ- ಮೊತ್ತ ಆ್ಯನಿಮಲ್ ಕೇರ್ ಟ್ರಸ್ಟ್ ಗೆ
ಸಮ್ಮೇಳನದಲ್ಲಿ ಡಾ. ಗಣೇಶ್ ಪೈಯವರ 47 ವರ್ಷಗಳ ವೃತ್ತಿ ಅನುಭವದ ಕುರಿತಾದ ‘100 ತೌಸಂಡ್ ಹವರ್ಸ್’ ಹ್ಯಾಮ್ ಸ್ಟರ್ಸ್ ವೀಲ್ ಆಫ್ ಪ್ರಾಕ್ಟೀಸ್ ಎಂಬ ಪುಸ್ತಕ ಬಿಡುಗಡಗೊಳ್ಳಲಿದೆ. ಆ ಪುಸ್ತಕ ಮಾರಾಟದಿಂದ ಬರುವ ಸಂಪೂರ್ಣ ಮೊತ್ತ ಆ್ಯನಿಮಲ್ ಕೇರ್ ಟ್ರಸ್ಟ್ ಗೆ ನೀಡಲಾಗುತ್ತದೆ. ಡಾ.ಗಣೇಶ್ ಪೈಯವರ ಮೂರನೇ ಪುಸ್ತಕ ಇದಾಗಿದ್ದು, ಈ ಹಿಂದಿನ ಪುಸ್ತಕದಿಂದ ದೊರೆತ ಸುಮಾರು 6 ಲಕ್ಷ ರೂ. ಮೊತ್ತದಲ್ಲಿ ಆ್ಯನಿಮಲ್ ಕೇರ್ ಟ್ರಸ್ಟ್ ಗೆ ಆಂಬುಲೆನ್ಸ್ ಖರೀದಿಗೆ ಒದಗಿಸಲಾಗಿದೆ ಎಂದು ಡಾ.ರಮೇಶ್ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಂಘಟನಾ ಸಮಿತಿಯ ಸಹ ಅಧ್ಯಕ್ಷ ಡಾ.ಸುಕುಮಾರ್, ಸಂಘಟನಾ ಕಾರ್ಯದರ್ಶಿ ಜ್ಯೋತಿ ಜಯರಾಮನ್, ಕೋಶಾಧಿಕಾರಿ ಡಾ.ರೊಚೆಲ್ ಮೊಂತೆರೋ, ಡಾ.ಜೆಸಿಂತಾ ಮಾರ್ಟಿಸ್ ಉಪಸ್ಥಿತರಿದ್ದರು.