ಮಂಗಳೂರು | ಬಸ್ ಪ್ರಯಾಣದಲ್ಲಿ ವಿದ್ಯಾರ್ಥಿನಿಗೆ ಎದೆನೋವು: ಬಸ್ಸನ್ನು ಆ್ಯಂಬುಲೆನ್ಸ್ ವೇಗದಲ್ಲಿ ಆಸ್ಪತ್ರೆಗೆ ತಲುಪಿಸಿದ ಚಾಲಕ

Update: 2024-07-31 06:15 GMT

ಮಂಗಳೂರು, ಜು.31: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಎದೆನೋವು ಕಾಣಿಸಿಕೊಂಡಾಗ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸನ್ನು ಆ್ಯಂಬುಲೆನ್ಸ್ ವೇಗದಲ್ಲಿ ನೇರವಾಗಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸುವ ಮೂಲಕ ಸಮಯ ಪ್ರಜ್ಞೆ ತೋರಿದ ಘಟನೆ ಮಂಗಳೂರಿನಲ್ಲಿ ಮಂಗಳವಾರ ನಡೆದಿದೆ.

ರೂಟ್ ನಂ.13 ಎಫ್ ನ ಕೃಷ್ಣ ಪ್ರಸಾದ್ ಬಸ್ ಕೂಳೂರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತದ ಮುನ್ಸೂಚನೆ ದೊರಕಿತ್ತು. ಈ ವೇಳೆ ವಿಷಯದ ಗಂಭೀರತೆ ಅರಿತ ಬಸ್ ಚಾಲಕ ಹಾಗೂ ನಿರ್ವಾಹಕರಾದ ಗಜೇಂದ್ರ ಕುಂದರ್, ಮಹೇಶ್ ಪೂಜಾರಿ ಹಾಗೂ ಸುರೇಶ್ ಅವರು ಇತರ ಪ್ರಯಾಣಿಕರೊಂದಿಗೆ ಬಸ್ಸನ್ನು ಆ್ಯಂಬುಲೆನ್ಸ್ ಮಾದರಿಯಲ್ಲಿ ಸೈರನ್ ಹಾಕಿಕೊಂಡು 6 ಕಿ.ಮೀ. ದೂರವನ್ನು 6 ನಿಮಿಷದಲ್ಲಿ ಕ್ರಮಿಸಿ ವಿದ್ಯಾರ್ಥಿನಿಯನ್ನು ನಗರದ ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾರ್ಥಿನಿಗೆ ತಕ್ಷಣ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ರೀತಿ ವಿದ್ಯಾರ್ಥಿನಿಯನ್ನು ಅಪಾಯದಿಂದ ಪಾರು ಮಾಡಿರುವ ಬಸ್ ಚಾಲಕ, ನಿರ್ವಾಹಕರ ಮಾನವೀಯ ಹಾಗೂ ಸಮಯ ಪ್ರಜ್ಞೆ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಚಾಲಕ ಹಾಗೂ ನಿರ್ವಾಹಕರ ಕಾಳಜಿ ಬಗ್ಗೆ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News