ಮಂಗಳೂರು: ಜಿಲ್ಲಾಧಿಕಾರಿ ಹಳೆ ಕಟ್ಟಡದಲ್ಲಿ ಪಾರಂಪರಿಕ ಉತ್ಸವಕ್ಕೆ ಚಾಲನೆ
ಮಂಗಳೂರು, ನ.30: ಟಿಪ್ಪು ಸುಲ್ತಾನ್ ಮರಣದ ನಂತರ 1799ರ ಜುಲೈ 8ರಂದು ಮೇಜರ್ ಸರ್ ಥೋಮಸ್ ಮುನ್ರೊ ಪ್ರಥಮ ಜಿಲ್ಲಾ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಮಂಗಳೂರು ಸ್ಟೇಟ್ ಬ್ಯಾಂಕಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡದಲ್ಲಿ ಎರಡು ದಿನಗಳ ಮಂಗಳೂರು ಪಾರಂಪರಿಕ ಉತ್ಸವಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೀಪ ಬೆಳಗಿಸಿ ಚಾಲನೆ ನೀಡಿ, ಒಂದು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಹಳೆ ಕಟ್ಟಡವನ್ನು ಸಂರಕ್ಷಿಸುವ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೆಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪಾರಂಪರಿಕ ಹಿನ್ನೆಲೆ ಹೊಂದಿರುವ 125 ವರ್ಷಗಳಷ್ಟು ಹಳೆಯದಾದ ಜಿಲ್ಲಾಧಿಕಾರಿ ಕಚೇರಿಯ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳು ಸ್ಥಳಾಂತರಗೊಂಡಿವೆ. ಪಾರಂಪರಿಕ ಉತ್ಸವದಲ್ಲಿ ಕರಾವಳಿಯ ಕಸುಬು, ಕಲೆ, ಬದುಕನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಸಂಗೀತ ಸಂಜೆ, ಗುಂಪು ಚರ್ಚೆ, ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ರಚನೆ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಿದೆ. ಶ್ರೀನಿವಾಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಚಾವಡಿ, ಬಾಸೆಲ್ ಮಿಷನ್, ಆರ್ಟ್ ಕೆನರಾ, ಕಲ್ಲಡ್ಕ ಮ್ಯೂಸಿಯಂ, ಕೆನರಾ ಚೇಂಬರ್ ಮುಂತಾದ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.
ಡಿಸೆಂಬರ್ 1 ರಂದು ಸಂಜೆ 6 ಗಂಟೆ ತನಕ ವಸ್ತು ಪ್ರದರ್ಶನ ಸಾರ್ವಜನಿಕರ ವಿಕ್ಷಣೆಗೆ ಲಭ್ಯವಿದೆ.
ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚಿತ್ರಸ್ಪರ್ಧೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ., ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ರಶ್ಮಿ ಉಪಸ್ಥಿತರಿದ್ದರು.