"ಮತ ಹಾಕಿ ಗೆಲ್ಲಿಸಿದವರೇ ʼಅನ್ಯʼ ಕೋಮಿನವರಾದರೇ?": ಗುಂಪು ಹತ್ಯೆ ಕುರಿತು ದ.ಕ. ಜಿಲ್ಲಾ ಉಸ್ತುವಾರಿ, ಗೃಹ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ!

Update: 2025-04-30 16:16 IST
"ಮತ ಹಾಕಿ ಗೆಲ್ಲಿಸಿದವರೇ ʼಅನ್ಯʼ ಕೋಮಿನವರಾದರೇ?": ಗುಂಪು ಹತ್ಯೆ ಕುರಿತು ದ.ಕ. ಜಿಲ್ಲಾ ಉಸ್ತುವಾರಿ, ಗೃಹ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ!
  • whatsapp icon

ಮಂಗಳೂರು: ನಗರದ ಹೊರವಲಯದಲ್ಲಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದ ಸಚಿವರ ಹೇಳಿಕೆಗಳು ಹಾಗೂ ಕಾಂಗ್ರೆಸ್‌ ನಾಯಕರ ವರಸೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹತ್ಯೆಯ ಹಿಂದೆ ಬಿಜೆಪಿ ಪ್ರಭಾವಿ ನಾಯಕರೊಬ್ಬರ ಕುಮ್ಮಕ್ಕಿದ್ದು, ಅವರನ್ನು ರಕ್ಷಿಸಲು ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ, ರಾಜ್ಯ ಸರ್ಕಾರವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ.

ಗುಂಪು ಥಳಿತ ಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ್ದ ರಾಜ್ಯ ಗೃಹಮಂತ್ರಿ ಜಿ ಪರಮೇಶ್ವರ್‌ ಅವರು “ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಹಲ್ಲೆ ನಡೆಸಲಾಗಿದೆ” ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಗುಂಪು ಹತ್ಯೆಗೊಳಗಾದವನು ‌ʼಪಾಕಿಸ್ತಾನ್ ಝಿಂದಾಬಾದ್ʼ ಹೇಳಿದ ಎಂಬ ಮಾಹಿತಿ ಗೃಹ ಸಚಿವರಿಗೆ ಕೊಟ್ಟವರು ಯಾರು? ಕೊಲೆ ಎಂದು ಗೊತ್ತಾಗಿದ್ದೇ ಎರಡು ದಿನಗಳ ಬಳಿಕವಾದರೆ, ಈ ʼಪಾಕಿಸ್ತಾನ್ ಝಿಂದಾಬಾದ್ʼ ಮಾಹಿತಿ ಎಲ್ಲಿಂದ ಬಂತು? ಹೇಗೆ ಬಂತು ?ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮುಸ್ಲಿಂ ಎಂಬ ಕಾರಣಕ್ಕೆ ದೇಶದ ಅಲ್ಲಲ್ಲಿ ಗುಂಪು ಥಳಿತ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅದೀಗ ಮಂಗಳೂರಿನಲ್ಲೂ ನಡೆದಿದೆ. ಆದರೆ, ಗೃಹಸಚಿವರು ಈ ಕೃತ್ಯದ ಗಂಭೀರತೆಯನ್ನು ಗೌಣಗೊಳಿಸಲು ಪ್ರಯತ್ನಿಸುತ್ತಿದ್ದಾರೆʼ ಎಂಬ ಆರೋಪ ಕೇಳಿ ಬಂದಿದೆ.

ವಿವಾದದ ಬಳಿಕ ಪ್ರತಿಕ್ರಿಯಿಸಿದ ಗೃಹಸಚಿವ ಜಿ. ಪರಮೇಶ್ವರ್, ʼಪಾಕಿಸ್ತಾನ ಝಿಂದಾಬಾದ್ʼ ಹೇಳಿದ್ದಕ್ಕೆ ಹಲ್ಲೆ ನಡೆಸಿದ್ದೇವೆ ಎಂದು ಕೊಲೆ ಆರೋಪಿಗಳು ಹೇಳಿದ್ದು, ನಾನು ಹೇಳಿದ್ದಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮೃತ ಮುಸ್ಲಿಂ ವ್ಯಕ್ತಿಯನ್ನು ʼಅನ್ಯಕೋಮಿನವನುʼ ಹಾಗೂ ಹತ್ಯೆಗೈದವರು ʼಕ್ರಿಕೆಟ್‌ ಆಟಗಾರರುʼ ಎಂದು ಸಂಭೋದಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರೊಬ್ಬರು ಪ್ರಜೆಗಳನ್ನು ʼಅನ್ಯʼ ರು ಎಂದು ಕರೆಯುವುದು ಎಷ್ಟು ಸರಿ?, ಮತ ಹಾಕಿ ಗೆಲ್ಲಿಸಿದವರೇ ʼಅನ್ಯʼ ಕೋಮಿನವರಾದರೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮೃತ ವ್ಯಕ್ತಿಯು, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಅವರ ವಯನಾಡು ಕ್ಷೇತ್ರದವರಾಗಿದ್ದು, ಪ್ರಕರಣದ ಬಗ್ಗೆ ಇದುವರೆಗೂ ಪ್ರಿಯಾಂಕಾ ಗಾಂಧಿ ಅವರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು, “ಹೊಡೆದವರು ಕ್ರಿಕೆಟ್ ಆಟಗಾರರಂತೆ, ದಾರುಣವಾಗಿ ಹತ್ಯೆಗೀಡಾದ ವಲಸೆ ಕಾರ್ಮಿಕ ಅನ್ಯಕೋಮಿನವನಂತೆ. ಮುಸ್ಲಿಮರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ "ಅನ್ಯ ಕೋಮಿನವರು" ಆದದ್ದು ಯಾವಾಗಾ?” ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, “ಮಂಗಳೂರಿನ ಇಂದಿನ ದುಸ್ಥಿತಿಗೆ ಅತಿಥಿ ಸಚಿವರಂತೆ ವರ್ತಿಸುವ ಉಸ್ತುವಾರಿ ಸಚಿವರೂ ಹೊಣೆ. ದಂಧೆಕೋರರ ಜೊತೆ, ಕೋಮುವಾದಿಗಳ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಪೊಲೀಸ್ ಕಮೀಷನರ್ ರನ್ನು ಎಲ್ಲಾ ಆರೋಪಗಳ ಹೊರತಾಗಿಯು ಮಂಗಳೂರಿನಲ್ಲಿ ಉಳಿಸಿಕೊಂಡು ಈ ಸ್ಥಿತಿಗೆ ಉಸ್ತುವಾರಿ ಸಚಿವರು ತಂದಿಟ್ಟಿದ್ದಾರೆ” ಎಂದು ಮುನೀರ್‌ ಅವರು ಹೇಳಿದ್ದಾರೆ.

ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರೂ ಈ ಬಗ್ಗೆ ಸರ್ಕಾರವನ್ನು ಟೀಕಿಸಿದ್ದು, “30 ರಿಂದ 40 ಜನರಿದ್ದ ಮೈದಾನದ ಕಡೆಗೆ ವಲಸೆ ಕಾರ್ಮಿಕನೊಬ್ಬ "ಪಾಕಿಸ್ತಾನ್, ಪಾಕಿಸ್ತಾನ್" ಎಂದು ಬೊಬ್ಬೆ ಹೊಡೆಯುತ್ತಾ ಬಂದ ಎಂದು ಗುಂಪುದಾಳಿ ಹತ್ಯೆಯ ಎಫ್ಐಆರ್ ನಲ್ಲಿ ಹೇಳಲಾಗಿದೆ. ಇದನ್ನು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂಬಿದ್ದಾರೆ. ಒಂದು ಯುವಕರ ಗುಂಪಿನೆಡೆಗೆ ಬಂದ ಒಬ್ಬನೇ ಒಬ್ಬ ಯುವಕ ಪಾಕಿಸ್ತಾನ್ ಪಾಕಿಸ್ತಾನ್ ಎಂದು ಬೊಬ್ಬೆ ಹೊಡೆದಿದ್ದು ನಿಜವೇ ಆದರೆ ಆ ಯುವಕ ಮಾನಸಿಕ ಅಸ್ವಸ್ಥ ಆಗಿರಬೇಕು. ಇಲ್ಲವೇ ಈ ಘಟನೆಯೇ ಸುಳ್ಳು ಇರಬೇಕು. ಹತ್ಯೆ ಮಾಡಿದ ಯುವಕರ ತಂಡದ ಸದಸ್ಯ ಕೊಟ್ಟ ಹೇಳಿಕೆಯನ್ನು ಈ ರಾಜ್ಯ ಸರ್ಕಾರ ನಂಬುತ್ತೆ ಎಂದರೆ ಅದರ ಗುಣಮಟ್ಟದ ಬಗ್ಗೆ ಅನುಮಾನ ಇರಲೇಬೇಕು. ಪಾಕಿಸ್ತಾನ್ ಎಂದು ಘೋಷಣೆ ಕೂಗಿಲ್ಲ ಎಂದು ಹೇಳುವುದಕ್ಕೆ ಆ ಯುವಕ ಬದುಕಿಲ್ಲ. ಘೋಷಣೆ ಕೂಗಿದ್ದಾನೆ ಎಂಬುದರ ಪ್ರತ್ಯಕ್ಷದರ್ಶಿಗಳೆಲ್ಲರೂ ಹತ್ಯೆಯ ಆರೋಪಿಗಳು ! ಹೀಗಿರುವಾಗ ಸರ್ಕಾರ ಕಾನೂನಿನ ಧ್ವನಿಯಲ್ಲಿ ಮಾತನಾಡಬೇಕೇ ಹೊರತು ಆರೋಪಿಗಳ ದ್ವನಿಯಲ್ಲಿ ಅಲ್ಲ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಒಟ್ಟಾರೆ, ಈ ಪ್ರಕರಣವನ್ನು ಸರ್ಕಾರ ನಿಭಾಯಿಸಿರುವ ರೀತಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮಾತ್ರವಲ್ಲ, ಕಾಂಗ್ರೆಸ್‌ ಗೆ ಮತ ಹಾಕಿದ ಮತದಾರರ ಅಸಮಾಧಾನಕ್ಕೂ ಕಾರಣವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News