ಮಂಗಳೂರು | ಎ.18ರಿಂದ 28 ರವರೆಗೆ ವಿಮೆನ್ ಇಂಡಿಯಾ ಮೂವ್‌ಮೆಂಟ್‌ ವತಿಯಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ

Update: 2025-04-17 13:02 IST
Photo of Press meet
  • whatsapp icon

ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಮೇಲೆ ಮಿತಿ ಮೀರಿದ ಆರ್ಥಿಕ ಹೊರೆಯನ್ನು ಹೇರುತ್ತಿದ್ದು, ಸರಕಾರಗಳ ಜನವಿರೋಧಿ ನೀತಿ ವಿರುದ್ಧ ಎ.18ರಿಂದ 28ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಕೇಂದ್ರ ಸರಕಾರ ಅಡುಗೆ ಅನಿಲ ದವರನ್ನು ಹೆಚ್ಚಿಸಿದರೆ, ರಾಜ್ಯ ಸರಕಾ ವಿದ್ಯುತ್, ಹಾಲು, ನೀರು, ಬಸ್ ದರಗಳನ್ನು ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ಜನ ಸ್ನೇಹಿಯಾಗಿದ್ದ ನಮ್ಮ ಮೆಟ್ರೋ ರೈಲಿನ ದರ ಏರಿಕೆಯಿಂದಲೂ ಜನ ಸಾಮಾನ್ಯರು ಖಾಸಗಿ ವಾಹನಗಳತ್ತ ಮುಖ ಮಾಡುವಂತಾಗಿದೆ. ಜಾಗತಿಕವಾಗಿ ತೈಲ ಬೆಲೆಗಳು ಇಳಿಕೆಯಾಗುತ್ತಿದ್ದರೂ ಸಹ ತೈಲಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಸರಕಾರ ಹಗಲು ದರೋಡೆಗೆ ಇಳಿದಿದೆ. ಒಂದೆಡೆ ಕೇಂದ್ರ ಸರಕಾರ ಅಚ್ಚೇದಿನ್ ಹೆಸರಿನಲ್ಲಿ, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿ ಲೂಟಿ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನ ಆಗಿದೆಯಲ್ಲಾ ಎಂಬ ಪ್ರಶ್ನೆಗೆ, ಗ್ಯಾರಂಟಿ ಹೆಸರಿನಲ್ಲಿ ನೀಡಿ ಮತ್ತೊಂದೆಡೆ ಬೆಲೆ ಏರಿಕೆ ಮೂಲಕ ಕಸಿದುಕೊಳ್ಳಲಾಗುತ್ತಿದೆ. ವಸಾಹತುಶಾಹಿ ಬ್ರಿಟಿಷರ ಜನ ವಿರೋಧಿ ನೀತಿಗಳಂತೆ ಅಗತ್ಯ ಸೇವಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಭಾರೀ ತೆರಿಗೆ ಪಾವತಿಸಬೇಕಾದ ದುಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಕಾರ್ಯದರ್ಶಿ ಝುಲೈಕ ಬಜ್ಪೆ, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀನ್ ಅಲಂಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News