ಕಟ್ಟಿಗೆ, ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಮೆರವಣಿಗೆ : ಬೆಲೆ ಏರಿಕೆ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

ಮಂಗಳೂರು : ಕೇಂದ್ರ ಸರಕಾರ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ ಬೆಲೆಯನ್ನು 50 ರೂ.ಗಳಿಗೆ ಏರಿಕೆ ಮಾಡಿರುವುದು ಸೇರಿದಂತೆ ಕೇಂದ್ರದ ಬೆಲೆ ಏರಿಕೆ ವಿರುದ್ಧ ಸೋಮವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆ, ಖಾಲಿ ಗ್ಯಾಸ್ ಸಿಲಿಂಡರ್ ಜತೆ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸುತ್ತಾ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಎನ್‌ಡಿಎ ಸರಕಾರವಿದೆ. ಅದಕ್ಕೆ ಹಿಂದಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 141 ಡಾಲರ್ ಇದ್ದ ಸಂದರ್ಭದಲ್ಲಿಯೂ ಪೆಟ್ರೋಲ್ ಬೆಲೆ 60 ರೂ. ನಲ್ಲಿ ಸಿಗುತ್ತಿತ್ತು. ಗ್ಯಾಸ್ ದರ 480 ರೂ. ಗಳಾಗಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಬದಲಾಗಿ ಈಗಾಗಲೇ ಹಲವು ಬಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನೂ ಇತ್ತೀಚೆಗೆ 50 ರೂ. ಗಳಿಗೆ ಏರಿಕೆ ಮಾಡಿದೆ. ಕರ್ನಾಟಕ ಸರಕಾರ 2 ರೂ. ದರ ಹೆಚ್ಚಿಸಿದರೆ ಜನಾಕ್ರೋಶ ವ್ಯಕ್ತಪಡಿಸುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.
ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲೇ ಕೇಂದ್ರ ಸರಕಾರ ಗ್ಯಾಸ್ ಬೆಲೆ ಏರಿಕೆ ಮಾಡಿ ಬಿಜೆಪಿಯವರಿಗೆ ಕಪಾಳಮೋಕ್ಷ ಮಾಡಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬರುವ ಸಂದರ್ಭ ರೂಪಾಯಿ ಮೌಲ್ಯ ಒಂದು ರೂಪಾಯಿಗೆ ಒಂದು ಡಾಲರ್ ಮಾಡುವುದಾಗಿ ಹೇಳಿದ್ದರು. ಆದರೆ ಜಾಗತಿತ ಮಟ್ಟದಲ್ಲಿ ರೂಪಾಯಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮೋದಿ, ಅಮಿತ್‌ಶಾ, ಅಂಬಾನಿ ಮತ್ತು ಅದಾನಿಗೆ ಮಾತ್ರವೇ ಅಚ್ಚೇ ದಿನ್ ಬಂದಿರುವುದು ಎಂದು ಅವರು ದೂರಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ನಮ್ಮ ದೇಶದ ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ ಮತ್ತು ಬೆಲೆ ಏರಿಕೆ. ಸಜೀವ ಸರಕಾರ ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಹಿಂದೆ ಯುಪಿಎ ಸರಕಾರದ ವಿರುದ್ಧ ಮಾಡಿದ್ದ ಭಾಷಣದ ಮಾತುಗಳನ್ನು ಈಗ ನೆನಪಿಸಬೇಕಿದೆ. ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಜನಾಕ್ರೋಶದ ವೇಳೆ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸ್ವಂತ ಬುದ್ದಿ ಇದ್ದ ಹಾಗಿಲ್ಲ. ಅಂತರರಾಷ್ಟ್ರೀಯವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಏರಿಕೆಯಾಗಿದೆ ಎನ್ನುತ್ತಾರೆ. ರಾಹುಲ್ ಗಾಂಧಿ ಇದ್ದಿದ್ದರೆ ಇನ್ನೂ ಹೆಚ್ಚಾಗುತ್ತಿತ್ತು ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ. ಆದರೆ ಕಾಂಗ್ರೆಸ್ ಜಮೀನುದಾರರು, ಬಂಡವಾಳ ಶಾಹಿಗಳಿಗೆ ತೊಂದರೆ ನೀಡಿದೆಯೇ ಹೊರತು ಯಾವತ್ತೂ ಬಡ ಜನರಿಗೆ ಅನ್ಯಾಯ ಮಾಡಿಲ್ಲ ಎಂದರು.
ಬಿಜೆಪಿ ಆಡಳಿತದಲ್ಲಿ ಅಚ್ಚೇ ದಿನ್ ಬರುತ್ತದೆ ಎಂದವರು, ಭಯೋತ್ಪಾದನೆಯನ್ನು ನಿಗ್ರಹಿಸುವುದಾಗಿ ಹೇಳಿದವರು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಯನ್ನೂ ರಾಜಕಾರಣಕ್ಕೆ ಬಳಸುತ್ತಾರೆ. ಬಿಹಾರದ ಚುನಾವಣಾ ಪ್ರಚಾರದಲ್ಲಿ ದ್ವೇಷದ ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿಯವರು ಹಿಂದೆ ಯುಪಿಎ ಸರಕಾರಕ್ಕೆ ಭಯೋತ್ಪಾದನೆ ವಿರುದ್ಧ ಕೇಳಿದ್ದ ಮಾತುಗಳನ್ನು ನೆನಪಿಸಬೇಕಿದೆ. ಅಂದು ಇಂಟೆಲಿಜೆನ್ಸಿ, ಬಿಎಸ್‌ಎಫ್, ಮಿಲಿಟರಿ, ಗೃಹ ಇಲಾಖೆ ಯಾರ ಕೈಯ್ಯಲ್ಲಿ ಇರುವುದು ಎಂದು ಕೇಳಿರುವ ಮೋದಿ ಸಾಹೇಬರೇ ಇಂದು, ಅವೆಲ್ಲವೂ ಯಾರ ಕೈಯ್ಯಲಿದೆ ಎಂದು ಹೇಳಿ ಎಂದು ರಮಾನಾಥ ರೈ ಪ್ರಶ್ನಿಸಿದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, 2014ರಲ್ಲಿ ದೇಶದಲ್ಲಿ ಬಿಜೆಪಿ ಸರಕಾರ ಆಡಳಿತ ಬಂದಾಗಿನಿಂದ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಜನಸಾಮಾನ್ಯರ ಜೀವನ, ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ದೇಶದ ಅಂತರರಾಷ್ಟ್ರೀಯ ಸಾಲ ಬಿಜೆಪಿ ಆಡಳಿತದಲ್ಲಿ ಐದು ಪಟ್ಟು ಹೆಚ್ಚಾಗಿದೆ. ಬ್ಯಾಂಕ್‌ಗಳ ತವರೂರಾದ ದ.ಕ. ಜಿಲ್ಲೆಯಲ್ಲಿ ಹುಟ್ಟಿಕೊಂಡ ವಿಜಯಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳ ಹೆಸರೇ ಇಲ್ಲದಂತೆ ಮಾಡಲಾಗಿದ್ದರೂ, ಸ್ಥಳೀಯ ಬಿಜೆಪಿ ನಾಯಕರು ಅದರ ಬಗ್ಗೆ ಧ್ವನಿ ಎತ್ತುವುದಿಲ್ಲ ಎಂದು ದೂರಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮುಗ್ಧ ಜನರ ಕೊಲೆಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮಣಿಪುರ ಉರಿಯುತ್ತಿದ್ದರೂ ಅಲ್ಲಿಗೆ ಪ್ರಧಾನಿ ಭೇಟಿ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಒದಗಿಸದೆ ಧರ್ಮಗಳ ನಡುವೆ ದ್ವೇಷವನ್ನು ಬಿತ್ತುವ ಕೆಲಸ ಮಾಡುತ್ತಿರುವ ಬಿಜೆಪಿಯ ದುರಾಡಳಿತದ ಪರಿಣಾಮ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನು ಸತ್ಯವಾಗಿಸುವ ಪ್ರಚಾರ ಕಾರ್ಯ ವೇಗವಾಗಿ ನಡೆಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಹಿಂದೆ ಕಚ್ಚಾತೈಲ ಬ್ಯಾರಲ್‌ಗೆ 141 ಡಾಲರ್ ಇದ್ದ ಸಮಯದಲ್ಲಿ 60 ರೂ. ಗೆ ಪೆಟ್ರೋಲ್ ಸಿಗುತ್ತಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿದಿದ್ದರೂ ಅಡುಗೆ ಅನಿಲ ದರವನ್ನು 50 ರೂ. ಗಳಿಗೆ ಏರಿಕೆ ಮಾಡಿರುವುದು ಕೇಂದ್ರದ ಬಿಎಪಿ ಸಾಧನೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ದಿನನಿತ್ಯ ಉಪಯೋಗಿಸುವ ಆಹಾರ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ. ಆದರೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಿಜೆಪಿಯವರಿಗೆ ನಾಚಿಯಾಗಿಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಹಲ್ಗಾಮ್‌ನಲ್ಲಿ ಭಾರತೀಯರು ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಾಗ ಸರ್ವ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಕೂಡಾ ಸಂಪೂರ್ಣ ಬೆಂಬಲವನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ಆದರೆ ಇಂತಹ ಅಪಾಯಕಾರಿ ಘಟನೆಯ ವೇಳೆ ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದ ಬಂದು ನೊಂದವರಿಗೆ ಸಾಂತ್ವಾನ ನೀಡುವುದು ಬಿಟ್ಟು ಬಿಹಾರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಜನರಿಗೆ ಅರಿವು ಮೂಡಿದೆ. ಜನಸಾಮಾನ್ಯರನ್ನು ಬೆಲೆ ಏರಿಕೆ ಮೂಲಕ ಕಂಗೆಡಿಸುತ್ತಿರುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಮುಂದೆ ಇನ್ನಷ್ಟು ತೀವ್ರತೆರನಾದ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಎಸ್.ಮುಹಮ್ಮದ್, ಇನಾಯತ್ ಅಲಿ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ವಂದಿಸಿದರು.
