ರಾಜಕೀಯ ಮೈಲೇಜಿಗೋಸ್ಕರ ನಕ್ಸಲರ ಶರಣಾಗತಿ ಪ್ರಕ್ರಿಯೆ: ಅಣ್ಣಾಮಲೈ ಆರೋಪ

Update: 2025-01-11 05:57 GMT

ಕೆ.ಅಣ್ಣಾಮಲೈ |  PC : X \ @annamalai_k

ಮಂಗಳೂರು: ಕರ್ನಾಟಕದ ಇತ್ತೀಚಿಗೆ ನಡೆದ ನಕ್ಸಲ್ ಶರಣಾಗತಿ, ಎನ್ಕೌಂಟರ್ ಬಗ್ಗೆ ಅನುಮಾನ ಮೂಡುತ್ತಿದೆ. ಇಲ್ಲಿ ರಾಜಕೀಯ ಮೈಲೇಜಿಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ನಕ್ಸಲ್ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭ ಕೆಲವೊಂದು ಶರತ್ತುಗಳಿರುತ್ತವೆ. ಆದರೆ ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್ ಶರಣಾಗತಿಯ ಬಗ್ಗೆ ಸ್ವಲ್ಪ ಅನುಮಾನ ಮೂಡುತ್ತಿದೆ. ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್ಕೌಂಟರ್ ನಲ್ಲೂ ಅನುಮಾನವಿದೆ. ಎನ್ಕೌಂಟರ್ ಆದ ತಕ್ಷಣ ನಕ್ಸಲ್ ಶರಣಾದರು ಎಂದು ಸರಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು ಎಂಬುದು ತಿಳಿದಿಲ್ಲ. ನಕ್ಸಲ್ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅಣ್ಣಾಮಲೈ ಹೇಳಿದರು.

ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್ಪಿಯಾಗಿದ್ದ ಸಂದರ್ಭ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿಯ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತವೆ. ಇಲ್ಲಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ. ನಕ್ಸಲ್ ಬೆಂಬಲಿಗರು ಸರಕಾರದ ಮೇಲೆ ಪ್ರಭಾವ ಬೀರಿದ್ದಾರೆ. ನಾಗರಿಕ ಸಮಾಜದ ಮೇಲೂ ಇವರು ಪ್ರಭಾವ ಬೀರಲಿದ್ದಾರೆ ಎಂದು ಅವರು ಆರೋಪಿಸಿದರು.

ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಅಣ್ಣಾಮಲೈ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News