ನೆಹರೂ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದವರು: ಯು.ಟಿ ಖಾದರ್

Update: 2024-11-14 09:05 GMT

ಮಂಗಳೂರು, ನ.14: ಭಾರತ ಸೇವಾದಳ ವತಿಯಿಂದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಗುರುವಾರ ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆ ಬಳಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೆಹರೂರವರು ದೇಶದ ಮೊದಲ ಪ್ರಧಾನಿಯಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದರು. ಅದರ ಪರಿಣಾಮವಾಗಿ ಬೃಹತ್ ಕೈಗಾರಿಕೆಗಳು, ಡ್ಯಾಮ್, ರಾಷ್ಟ್ರೀಯ ಹೆದ್ದಾರಿ ಸಹಿತ ಅನೇಕ ಯೋಜನೆಗಳು ಜಾರಿಗೆ ಬಂದವು. ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚಿನ ವಸ್ತುಗಳು ವಿದೇಶದಿಂದ ಆಮದು ಮಾಡುತ್ತಿದ್ದು, ಸ್ವಾತಂತ್ರ್ಯ ನಂತರ ನಮ್ಮ ದೇಶದಲ್ಲಿಯೇ ತಯಾರಾಗುತ್ತಿತ್ತು. ಜಗತ್ತಿನ ಇತರ ಶಕ್ತಿಶಾಲಿ ದೇಶಗಳ ಸಾಲಿಗೆ ಭಾರತವನ್ನು ತಂದು ನಿಲ್ಲಿಸಿದ ಕೀರ್ತಿ ನೆಹರೂರವರಿಗೆ ಸಲ್ಲುತ್ತದೆ ಎಂದರು.

ಇದಕ್ಕೂ ಮೊದಲು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂರವರು ಭಾಗವಹಿಸಿ ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ ನೆಹರೂರವರು ತನ್ನ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮಾಡಿದ್ದರು. ಮಕ್ಕಳ ಮೇಲೆ ಅವರಿಗೆ ಬಹಳಷ್ಟು ಪ್ರೀತಿ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿ ಇದೆ. ಮಕ್ಕಳೇ ದೇಶದ ಭವಿಷ್ಯ ಎಂದು ನೆಹರೂರವರು ಅನೇಕ ಬಾರಿ ಹೇಳುತ್ತಿದ್ದರು. ನೆಹರೂರವರ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದರು.

 ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಪ್ರದಾನ ಕಾರ್ಯದರ್ಶಿ ಟಿ. ಕೆ. ಸುಧೀರ್, ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಉದಯ ಕುಂದರ್, ಸುನಿಲ್ ದೇವಾಡಿಗ, ರಾಘವೇಂದ್ರ ರಾವ್, ಹರ್ಬಟ್ ಡಿಸೋಜ, ರಮಾನಂದ ಪೂಜಾರಿ,ಉಸ್ಮಾನ್ ಕಲ್ಲಾಪು, ಉಪಸ್ಥಿತರಿದ್ದರು.

ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ ಸ್ವಾಗತಿಸಿ, ಮುಖ್ಯಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರ್ವಹಿಸಿದರು.

ಬೋಳಾರ ಹಿರಿಯ ಪ್ರಾಥಮಿಕ ಶಾಲೆ, ಬಂದರು ಪ್ರೌಢ ಶಾಲೆ, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News