ಶಕ್ತಿನಗರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ

Update: 2023-12-22 05:27 GMT

ಶಕ್ತಿನಗರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮಮಂಗಳೂರು, ಡಿ.22: ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮದರ್ ಆಫ್ ಗಾಡ್ ಚರ್ಚ್ ಮರಿಯಗಿರಿ, ಸಿಓಡಿಪಿ ಸಂಸ್ಥೆ ನಂತೂರು, ಜ್ಣಾನದೀಪ ಮಹಿಳಾ ಮಂಡಳಿ, ಜ್ಯೋತಿ ಸ್ತ್ರೀ ಶಕ್ತಿ ಸಂಘ, ದೀಪಾ ಫ್ರೆಂಡ್ಸ್ ಕ್ಲಬ್, ಶಕ್ತಿ ಫ್ರೆಂಡ್ಸ್ ಕ್ಲಬ್, ಪದವು ಫ್ರೆಂಡ್ಸ್ ಕ್ಲಬ್, ವಿದ್ಯಾದೀವಿಗೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ 'ಪ್ರೀತಿ ಹರಡಲಿ ಎಲ್ಲೆಡೆ' ಎಂಬ ಘೋಷವಾಕ್ಯದೊಂದಿಗೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಶಕ್ತಿನಗರದಲ್ಲಿ ಆಯೋಜಿಸಲಾಗಿತು.

ಸಮಾರಂಭ ಉದ್ಘಾಟಿಸಿದ ಮದರ್ ಆಫ್ ಗಾಡ್ ಚರ್ಚ್ ನ ಧರ್ಮಗುರು ವಂ.ಫಾ.ಜೆರಾಲ್ಡ್ ಡಿಸೋಜ ಮಾತನಾಡಿ, ಇಡೀ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರಿ ಶಾಂತಿದೂತರಾಗಿ ಮೆರೆದ ಯೇಸುಕ್ರಿಸ್ತರ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದ ಈ ಕಾಲದಲ್ಲಿ ಮಾನವೀಯ ಮೌಲ್ಯಗಳು ಉತ್ತುಂಗಕ್ಕೇರಬೇಕಾದರೆ ಎಲ್ಲಾ ಧರ್ಮಗಳ ಹಬ್ಬಗಳನ್ನು ಸರ್ವ ಧರ್ಮದ ಜನತೆ ಒಂದಾಗಿ ಆಚರಿಸಿದರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಹಿರಿಯ ಚಿಂತಕ, ನಿವೃತ್ತ ಪ್ರಾಂಶುಪಾಲ ಡಾ.ವಸಂತ ಕುಮಾರ್ ಮಾತನಾಡಿ, ದ್ವೇಷ ತುಂಬಿದ ನಾಡಿನಲ್ಲಿ ಪ್ರೀತಿ ಹಂಚುವ ಕಾರ್ಯ ಭರದಿಂದ ಸಾಗಬೇಕಾಗಿದೆ. ಪ್ರತಿಯೊಬ್ಬರ ಬದುಕು ಹಸನಾಗಬೇಕಾದರೆ ಪ್ರೀತಿ, ಶಾಂತಿ ನೆಲೆಗೊಂಡರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಹೃದಯಗಳನ್ನು ಬೆಸೆಯುವಲ್ಲಿ ನಾಂದಿ ಹಾಡಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಮಾತನಾಡಿ, ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಮನಸು ಮನಸುಗಳ ಮಧ್ಯೆ ಸೇತುವೆ ನಿರ್ಮಾಣ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಂದು ಧರ್ಮದ ಹಬ್ಬಗಳು ಆಯಾಯ ಧರ್ಮದ ಜನತೆಗೆ ಸೀಮಿತವಾಗದೆ ಸರ್ವ ಧರ್ಮದ ಜನತೆ ಒಗ್ಗೂಡಿ ಆಚರಿಸಿದಾಗ ಮಾತ್ರವೇ ಭವ್ಯ ಭಾರತದ ಪರಂಪರೆ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು.

ಸಿಓಡಿಪಿ ಸಂಸ್ಥೆಯ ಧರ್ಮಗುರು ಫಾ.ವಿನ್ಸೆಂಟ್ ಡಿಸೋಜ, ಸ್ಥಳೀಯ ಕಾರ್ಪೊರೇಟರ್ ಗಳಾದ ಕಿಶೋರ್ ಕೊಟ್ಟಾರಿ, ವನಿತಾ ಪ್ರಸಾದ್ ಮಾತನಾಡಿ ಶುಭ ಹಾರೈಸಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಫಾ.ಸುದೀಪ್ ಪೌಲ್, ಫಾ.ಅನಿಲ್ ಐವನ್ ಫೆರ್ನಾಂಡಿಸ್, ಪ್ರಕಾಶ್ ಗಟ್ಟಿ, ದೇವಾನಂದ, ಮೇರಿ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸುದೀರ್ಘ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿರುವ ಪುಷ್ಪಾ ಬಿ. ಶೆಟ್ಟಿ ಹಾಗೂ ನಾಲ್ಯಪದವು ಶಾಲೆಯ ಉನ್ನತಿಗಾಗಿ ಶ್ರಮಿಸಿರುವ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ವೀರೇಶ್ ಅವರನ್ನು ಸನ್ಮಾನಿಸಲಾಯಿತು.

ಯುವ ವಕೀಲ ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ರೊನಾಲ್ಡ್ ಟೋನಿ ಪಿಂಟೋ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಪುಷ್ಪಾ ಶೆಟ್ಟಿ ವಂದಿಸಿದರು.


 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News