ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸ್ಥಳೀಯಾಡಳಿತ ವಿಫಲ: ಡಿವೈಎಫ್ ಐ ಆರೋಪ

Update: 2024-07-09 09:12 GMT

Photo: fb/dyfimoodbidri

ಮಂಗಳೂರು, ಜು.9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಬಾರಿ ಮಳೆಗಾಲ ಆರಂಭವಾದರೆ ಸಾಂಕ್ರಾಮಿಕ ರೋಗಗಳು ಜನತೆಯನ್ನು ಬಾಧಿಸುವುದು ಸರ್ವೇಸಾಮಾನ್ಯ. ಈ ಬಾರಿ ಮಳೆ ಬೀಳುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಗಿ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣದಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಘಟಕ ಆರೋಪಿಸಿದೆ.

ನಗರದ ಅನೇಕ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಸೃಷ್ಟಿಯಾಗಿ ಇದರಿಂದ ಜನತೆಯು ರೋಗಬಾಧಿತರಾಗಿ ಪರಿತಪಿಸುವಂತಾಗಿದೆ. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತವು ಮಳೆಗಾಲ ಎದುರಿಸಲು ಮತ್ತು ಆರೋಗ್ಯ ಸುರಕ್ಷಾ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಗಳನ್ನಷ್ಟೇ ನಡೆಸಿದೆ. ಡೆಂಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳೀಯಾಡಳಿತದ ಪರವಾನಿಗೆ ಪಡೆದು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡ ಕಾಮಗಾರಿಗಳಲ್ಲಿ ನೈರ್ಮಲ್ಯಗಳ ಕುರಿತಾಗಿ ಯಾವುದೇ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿಲ್ಲ. ಸ್ಮಾರ್ಟ್ ಸಿಟಿ ಸಹಿತ ಪಾಲಿಕೆ ಕೈಗೆತ್ತಿಕೊಂಡಿರುವ ಅರ್ಧಂಬರ್ಧ ಅಭಿವೃದ್ದಿ ಕಾಮಗಾರಿಗಳಿಂದ ರಸ್ತೆ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮಾಣದಲ್ಲಿ ಪಾಲಿಕೆ ಆಡಳಿತವೇ ನೇರ ಹೊಣೆ. ಈ ರೀತಿ ನೀರು ನಿಲ್ಲುವ ರಸ್ತೆ, ತಗ್ಗು ಪ್ರದೇಶಗಳಲ್ಲಿ, ಚರಂಡಿ, ತೋಡುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವಲ್ಲಿ ನಗರ ಪಾಲಿಕೆ ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಡಿವೈಎಫ್ಐ ದೂರಿದೆ.

ಇದೇ ವೇಳೆ ಡೆಂಗಿ ಪರೀಕ್ಷೆ ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಪರೀಕ್ಷಾ ದರಗಳನ್ನು ಸರಕಾರ ನಿಗದಿಗೊಳಿಸಿರುವುದು ಬಿಟ್ಟರೆ ಡೆಂಗಿ ಪತ್ತೆಯಾದ ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸಾ ದರ ಮತ್ತು ವೈದ್ಯರು ವಿಧಿಸುವ ಶುಲ್ಕದ ಬಗ್ಗೆ ಪ್ರಸ್ತಾಪಗಳಿಲ್ಲ. ಪ್ರತೀ ಸಂದರ್ಭದಲ್ಲೂ ಖಾಸಗೀ ಆಸ್ಪತ್ರೆಗಳು ರೋಗದ ಹೆಸರಲ್ಲಿ ಲೂಟಿ ಮಾಡುತ್ತವೆ. ಈಗಾಗಲೇ ಸರಕಾರ ಪರೀಕ್ಷಾ ದರ ಎಲಿಸಾ ಎನ್ ಎಸ್ 1 -300, ಎಲಿಸಾ ಐಜಿಎಂ-300, ರ್ಯಾಪಿಡ್ ಕಾರ್ಡ್-250 ಎಲ್ಲಾ ಸೇರಿದರೆ 600 ರೂ. ಎಂದು ದರ ವಿಧಿಸಿದ್ದರೂ ಕೆಲವೊಂದು ಖಾಸಗಿ ಆಸ್ಪತ್ರೆಗಳು ಒಂದೊಂದು ಪರೀಕ್ಷೆಗಳಿಗೆ 500, 600 ರೂ. ಪಡೆಯುತ್ತಿವೆ ಮತ್ತು ದಾಖಲಾದ ರೋಗಿಗಳಿಗೆ ವಿಪರೀತ ಪ್ರಮಾಣದ ಚಿಕಿತ್ಸಾ ದರಗಳನ್ನು ವಿಧಿಸುತ್ತಿವೆ ಎಂಬ ಆರೋಪಗಳಿವೆ. ಈ ರೀತಿಯ ಜಿಲ್ಲಾಡಳಿತದ ನಡೆಯನ್ನು ಖಂಡಿಸುವುದಾಗಿ ಡಿವೈಎಫ್ಐ ದಕ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತಿಕ್ರಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News