ಪಿಸಿಯೋಥೆರಪಿ ಚಿಕಿತ್ಸೆಗೆ ತಂತ್ರಜ್ಞಾನದ ಕೊಡುಗೆ ಗಮನಾರ್ಹ: ತೆಲಂಗಾಣ ಸಚಿವ ಶ್ರೀಧರ್ ಬಾಬು

Update: 2024-09-27 12:54 GMT

ಮಂಗಳೂರು, ಸೆ.27: ಪಿಸಿಯೋಥೆರಪಿ ಚಿಕಿತ್ಸೆಗೆ ತಂತ್ರಜ್ಞಾನದ ಗಮನಾರ್ಹ ಕೊಡುಗೆ ನೀಡಿದೆ. ಎ.ಜೆ. ಶೆಟ್ಟಿ ಸ್ಥಾಪಿಸಿದ ಈ ಪಿಸಿಯೋಥೆರಪಿ ಕೇಂದ್ರವು 30 ವರ್ಷಗಳ ಸಾರ್ಥಕ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿವೆ. ಮುಂದೆಯೂ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಲಿ. ಇಂದಿನ ಆವಿಷ್ಕಾರವು ನಾಳೆಯ ದಿನವನ್ನು ನಿರ್ಧರಿಸು ತ್ತದೆ ಎಂದು ತೆಲಂಗಾಣ ಕೈಗಾರಿಕಾ ಹಾಗೂ ವಾಣಿಜ್ಯ ಸಚಿವ ಡಿ.ಶ್ರೀಧರ್ ಬಾಬು ಹೇಳಿದರು.

ಎಜೆ ಆಸ್ಪತ್ರೆಯ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ವತಿಯಿಂದ ನಗರದ ಎ.ಜೆ. ಆಸ್ಪತ್ರೆ ಯಲ್ಲಿ ಎರಡು ದಿನಗಳ ರಾಷ್ಟ್ರೀಯ ಪಿಸಿಯೋಥೆರಪಿ ಕಾನ್ಫರೆನ್ಸ್ ಕಾನ್ಫ್ಲುಯೆನ್ಸ್-2024ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಿಸಿಯೋಥೆರಪಿ ಚಿಕಿತ್ಸಾ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸವಾಲುಗಳು ಇದೆ. ತಂತ್ರಜ್ಞಾನ ನಿಮಗೆ ಮುಂದಿನ ದಿನಗಳಲ್ಲಿ ಹೇಗೆ ಸಹಾಯ ಮಾಡುತ್ತದೆ? ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರಿಯಲು ಇಂತಹ ಸಮ್ಮೇಳನ ಪೂರಕವಾಗುತ್ತದೆ. ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿದೆ. ಈಗ ರೋಬೋಟಿಕ್ ಡಿವೈಸ್‌ಗಳಿವೆ. ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಪಿಸಿಯೋಥೆರಪಿ ವೈದ್ಯರು ಸುದೀರ್ಘ ಕಾಲ ರೋಗಿಯನ್ನು ಗಮನಿಸುತ್ತಿರಬೇಕಾಗುತ್ತದೆ ಎಂದರು.

ಮುಂದಿನ ಪೀಳಿಗೆಯು ಪಾರಂಪರಿಕ ಪಿಸಿಯೋಥೆರಪಿ ಚಿಕಿತ್ಸೆಯನ್ನೇ ಬಳಸದೆ ಆಧುನಿಕ ತಂತ್ರಜ್ಞಾನ ಬಳಕೆಯತ್ತ ಗಮನ ಕೊಡಬೇಕು. ಹೊಸ ತಂತ್ರಜ್ಞಾನದ ಬಳಕೆಯಿಂದ ಪಿಸಿಯೋಥೆರಪಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯ ಎಂದು ಸಚಿವ ಡಿ.ಶ್ರೀಧರ್ ಬಾಬು ಹೇಳಿದರು.

ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ಇದರ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ಮಾತನಾಡಿ, ಪಿಸಿಯೋಥೆರಪಿ ವಿದ್ಯಾರ್ಥಿಗಳು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ರಾಜಕೀಯ, ಸಾಮಾಜಿಕ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಖುಷಿಯ ವಿಚಾರ. ಪಿಸಿಯೋಥೆರಪಿ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಮಾತನಾಡಿ, ಪಿಸಿಯೋಥೆರಪಿ ಕ್ಷೇತ್ರಕ್ಕೆ ಇಂದು ದೇಶ ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ. ಪಿಸಿಯೋಥೆರಪಿ ಕಲಿತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರ ದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಕಾನ್ಫರೆನ್ಸ್‌ಗೆ ಆಗಮಿಸಿರುವುದು ಕುಶಿಯ ವಿಚಾರ ಎಂದರು.

ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಎ.ಪ್ರಶಾಂತ್ ಶೆಟ್ಟಿ, ಅಶ್ರಿತಾ ಪಿ.ಶೆಟ್ಟಿ, ಡಾ.ವಿಶಾಲ್ ರಾವ್, ಹರೀಶ್, ಚರಣ್ ಶೆಟ್ಟಿ, ಡಾ.ವೈಶಾಲಿ, ಡಾ. ಅಜಯ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕ ಡಾ.ಅಭಿಲಾಷ್ ಪಿ.ವಿ. ಸ್ವಾಗತಿಸಿದರು. ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಕಾಲೇಜಿನ ಪ್ರಾಂಶುಪಾಲ ಸಂಜಯ್ ಸ್ಯಾಮ್ಯೂವೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಎಸ್. ಕೃಷ್ಣ ವಂದಿಸಿದರು.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News