ಪಾವೂರು ಉಳಿಯ ದ್ವೀಪ ಉಳಿಸಲು ಪಾದಯಾತ್ರೆ, ಪ್ರತಿಭಟನೆ

Update: 2024-09-27 16:34 GMT

ಮಂಗಳೂರು: ಉಳ್ಳಾಲ ತಾಲೂಕಿ ಒಳಪಟ್ಟ ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯಿಂದ ಜೀವನ ನಡೆ ಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಘಟಕ ನೇತೃತ್ವದಲ್ಲಿ ಶುಕ್ರವಾರ ಪಾದಯಾತ್ರೆ- ಪ್ರತಿಭಟನಾ ಸಭೆ ನಡೆಯಿತು.

ನಗರದ ಬಲ್ಮಠ ವೃತ್ತದಿಂದ ಆರಂಭಗೊಂಡ ಪಾದಯಾತ್ರೆಯು ಮಿನಿ ವಿಧಾನ ಸೌಧದ ಎದುರು ಸಮಾಪನಗೊಂಡು ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ದ್ವೀಪ ನಿವಾಸಿಗಳ ಪರವಾಗಿ ಬೀದಿಗಿಳಿಯುವ ಮೂಲಕ ಬೆಂಬಲ ಸೂಚಿಸಿದರು.

ದ್ವೀಪ ಪ್ರದೇಶದ ಸುತ್ತಮುತ್ತ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಅದನ್ನು ನಿಲ್ಲಿಸುವಂತೆ ಬಿತ್ತಿ ಪತ್ರಗಳೊಂದಿಗೆ ಪಾದಯಾತ್ರೆಯುದ್ದಕ್ಕೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ಕೂಲಿ ಕೆಲಸಕ್ಕೆ ಹೋಗದಿದ್ದರೆ ದಿನದೂಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ದ್ವೀಪ ನಿವಾಸಿಗಳಿಗೆ ಮರಳು ದಂಧೆ ನಡೆಸುವವರಿಂದ ಜೀವನವೇ ದುಸ್ತರವಾಗಿದೆ ಎಂದರು.

ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ರಾಣಿಪುರ ಉಳಿಯದಲ್ಲಿ ಮನೆಗಳು ಅಪಾಯದಲ್ಲಿವೆ. ದ್ವೀಪ ನಿವಾಸಿಗಳ ನೋವನ್ನು ಆಲಿಸಿ ಜಿಲ್ಲಾಡಳಿತ ಮರಳುಗಾರಿಕೆ ನಿಷೇಧಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಡಿವೈಎಫ್‌ಐನ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದ್ವೀಪನಿವಾಸಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಇಂತಹ ವ್ಯವಸ್ಥೆಯ ಮೂಲಕ ಅಕ್ರಮ ಮರಳುಗಾರರನ್ನು ತಡೆದರೆ ಅಲ್ಲಿನ ನಿವಾಸಿಗಳಿಗೆ ನ್ಯಾಯ ದೊರಕೀತು ಎಂದರು.

ಉಳ್ಳಾಲ, ಕೋಣಾಜೆ ಹಾಗೂ ವಾಮಂಜೂರು ಠಾಣಾ ವ್ಯಾಪ್ತಿಯ ಪೊಲೀಸರು ಅಕ್ರಮ ಮರಳುಗಾರರ ಜತೆ ಶಾಮೀಲಾ ಗಿರುವ ಕಾರಣ ದ್ವೀಪ ನಾಶವಾಗುತ್ತಿದೆ. ರಾತ್ರೋರಾತ್ರಿ ಸಾಲುಗಟ್ಟಲೆ ಟಿಪ್ಪರ್‌ಗಳು ಪೊಲೀಸರೆದುರೇ ಸಾಗುತ್ತಿದ್ದರೂ ಕ್ರಮ ಆಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ಹೋರಾಟ ಇನ್ನಷ್ಟು ತೀವ್ರ ರೂಪ ಪಡೆಯಲಿದೆ ಎಂದು ಹೇಳಿದರು.

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಮಾತನಾಡಿ, ಕ್ರೈಸ್ತ ಬಾಂಧವರ ಜತೆಗೆ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ನಾಗರಿಕರು ದ್ವೀಪ ನಿವಾಸಿಗಳ ಜತೆಗಿದ್ದೇವೆ ಎಂದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬಜಾಲ್, ಸಭಾದ ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೋ, ಸ್ಥಳೀಯರ ಪರವಾಗಿ ಗಿಲ್ಬರ್ಟ್ ಡಿಸೋಜಾ ಮೊದಲಾದರು ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರಾದ ಮಂಜುಳಾ ನಾಯಕ್, ಯಾದವ ಶೆಟ್ಟಿ, ಸದಾಶಿವ ಉಳ್ಳಾಲ್, ಶಶಿಧರ ಶೆಟ್ಟಿ, ಜೀತ್ ಮಿಲನ್ ರೋಚ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News