ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅರ್ಥಪೂರ್ಣ ಕಾರ್ಯ: ಶಾಸಕ ವೇದವ್ಯಾಸ ಕಾಮತ್

Update: 2024-11-23 14:05 GMT

ಮಂಗಳೂರು: ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು, ಆರೋಗ್ಯ, ಶಿಕ್ಷಣಕ್ಕೆ ಸಹಾಯ, ಆರ್ಥಿಕತೆಗೆ ಪ್ರೋತ್ಸಾಹ ಹಾಗೂ ಸಾಮಾಜಿಕ ಬದ್ದತೆಯ ಕಾರ್ಯಕ್ರಮಗಳ ಮೂಲಕ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿಜವಾದ ಅರ್ಥ ಪೂರ್ಣ ಕೆಲಸ ನಡೆಯುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ನಗರದ ಕಸಬಾ ಬೇಂಗ್ರೆಯ ಫುಟ್ಬಾಲ್ ಮೈದಾನದಲ್ಲಿ ಶನಿವಾರ ನಡೆದ ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಬಜಪೆ ಹಾಗೂ ಮಂಗಳೂರು ತಾಲೂಕು ವತಿಯಿಂದ ಪದ್ಮಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಮಾರ್ಗದರ್ಶನದೊಂದಿಗೆ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಮಂಗಳೂರು ಮತ್ತು ಬಜಪೆ ಇದರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಒಕ್ಕೂಟ ಪದಗ್ರಹಣ ಮತ್ತು ನಾನಾ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘದ ರೀತಿಯ ಕಾರ್ಯಪದ್ದತಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.ವಿದೇಶದಿಂದಲೂ ಜನರು ಆಗಮಿಸಿ ಧರ್ಮಸ್ಥಳ ಯೋಜನೆಯನ್ನು ಅಧ್ಯಯನ ನಡೆಸಿ ಅವರಲ್ಲಿ ಅನುಷ್ಠಾನಗೊಳಿಸಲು ಮುಂದಾಗುತ್ತಿದ್ದಾರೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಅವರು ಚೆಂಚ್ ಡೆಸ್ಕ್ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ಬ್ಯಾಂಕಿಗೆ ಬೇಕಾದ ದಾಖಲೆಗಳನ್ನು ಒದಗಿಸಲು ಜನರಿಗೆ ಆಗದೆ ಸಾಲ ಪಡೆಯುವಲ್ಲಿ ವಂಚಿತರಾಗುತ್ತಿದ್ದ ಸಂದರ್ಭದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಜನರ ಪರವಾಗಿ ನಾನು ಗ್ಯಾರಂಟಿ ನಿಲ್ಲುತ್ತೇನೆ ಎಂದು ದೃಢ ಸಂಕಲ್ಪ ಮಾಡಿ ಸುಲಭವಾಗಿ ರಾಜ್ಯದ ೫೫ ಲಕ್ಷ ಕುಟುಂಬಗಳಿಗೆ ಸಾಲ ಸಿಗುವ ವ್ಯವಸ್ಥೆಯನ್ನು ಕಲ್ಪಿಸಿದರು ಎಂದರು.

ಈ ಸಂದರ್ಭ ಮೇಯರ್ ಮನೋಜ್ ಕುಮಾರ್ ಸುರಕ್ಷಾ ಚೆಕ್ ವಿತರಣೆ ಮಾಡಿದರು. ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ಅಶ್ವಿನ್ ಕುಮಾರ್ ಲಾಭಾಂಶ ವಿತರಿಸಿದರು.

ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯೀಲ್ ಜನಮಂಗಲ ಪರಿಕರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಿರ್ಗತಿಕರ ಮಾಸಾಶನ ಮಂಜೂರಾತಿ ಪತ್ರ ವಿತರಣೆ ಸೇರಿದಂತೆ ನಾನಾ ಯೋಜನೆಗಳ ವಿತರಣೆ ನಡೆಯಿತು.

ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್ ದೀಪಂ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್, ಜನಜಾಗೃತಿ ವೇದಿಕೆ ಮಂಗಳೂರು ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಸ್ತ್ರೀ ಜಾಗೃತಿ ಸಮನ್ವಯ ಅಧಿಕಾರಿ ಡಾ. ಶಂಶಾದ್ ಕುಂಜತ್ತ್‌ಬೈಲ್, ಮಹಾಬಲ ಚೌಟ, ಶಾಂತಾರಾಮ ಪೈ, ಬ್ಯಾಂಕ್ ಬರೋಡಾದ ನಿತಿನ್, ವಿಜಯ್ ಕುಮಾರ್, ಜನ ಜಾಗೃತಿ ವೇದಿಕೆ ಮಂಗಳೂರು ತಾಲೂಕು ನಿಕಟ ಪೂರ್ವ ಅಧ್ಯಕ್ಷ ಸದಾಶಿವ ಶೆಟ್ಟಿ, ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಎಂ., ಮಮತ ಎನ್ ಶೆಟ್ಟಿ, ನೂತನ ಆಧ್ಯಕ್ಷ ಗೀತಾ ಪ್ರವೀಣ್, ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News