ಮಂಗಳೂರು: ಸ್ನೇಹ ಬಳಗದಿಂದ ಮರ್ಹೂಂ ಮುಮ್ತಾಝ್ ಅಲಿ ಅನುಸ್ಮರಣೆ

Update: 2024-11-23 14:52 GMT

ಮಂಗಳೂರು: ಒಂದುವರೆ ತಿಂಗಳ ಹಿಂದೆ ನಿಧನರಾದ ಸಮುದಾಯದ ನಾಯಕ ಮರ್ಹೂಂ ಬಿ.ಎಂ. ಮುಮ್ತಾಝ್ ಅಲಿ ಅವರ ಅನುಸ್ಮರಣೆ ಕಾರ್ಯಕ್ರಮವು ಱಸ್ನೇಹಬಳಗದ ವತಿಯಿಂದ ಶನಿವಾರ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವೈದ್ಯ ಡಾ. ಮುಹಮ್ಮದ್ ಇಸ್ಮಾಯೀಲ್ ಹೆಜಮಾಡಿ ಮಾತನಾಡಿ ಮುಮ್ತಾಝ್ ಅಲಿ ಅವರ ಜೀವನ ಮತ್ತು ಮರಣದಿಂದ ಸಮುದಾಯವು ಸಾಕಷ್ಟು ಕಲಿಯಲಿಕ್ಕೆ ಇದೆ. ಮನುಷ್ಯರು ತಪ್ಪು ಮಾಡವುದು ಸಹಜ. ಆ ತಪ್ಪನ್ನು ಮತ್ತೆ ಮತ್ತೆ ಎತ್ತಿ ತೋರಿಸುವುದರಿಂದ ಯಾರಿಗೂ ಯಾವ ಲಾಭವೂ ಇಲ್ಲ. ಮುಮ್ತಾಝ್ ಅಲಿ ಸಮುದಾಯದ ನಾಯಕನಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರು. ಅವರು ದೈಹಿಕ, ಮಾನಸಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ನೊಂದಿದ್ದರು. ಕಷ್ಟಕಾಲದಲ್ಲಿ ಸಮುದಾಯ ಅವರಿಗೆ ಸ್ಪಂದಿಸಬೇಕಿತ್ತು. ಆದರೆ ಸಮಾಜವು ಸತ್ಯಾಂಶ ತಿಳಿಯದ ವಾಟ್ಸ್‌ಆ್ಯಪ್ ಮೂಲಕ ಬಂದವುಗಳನ್ನೆಲ್ಲಾ ಫಾರ್ವರ್ಡ್ ಮಾಡಿ ನೊಂದವರ ಮನಸ್ಸನ್ನು ಘಾಸಿಗೊಳಿಸುತ್ತದೆ. ಇತರರ ವೈಯಕ್ತಿಕ ಬದುಕಿನ ಬಗ್ಗೆ ಚೆಲ್ಲಾಟವಾಡುವ ಇಂತಹ ಕೆಟ್ಟ ಚಾಳಿ ಇಲ್ಲಿಗೆ ಕೊನೆಯಾಗಬೇಕು ಎಂದು ಆಶಿಸಿದರು.

ಧಾರ್ಮಿಕ ವಿದ್ವಾಂಸರಾದ ಡಾ. ಅಬ್ದುರ‌್ರಶೀದ್ ಝೈನಿ ಕಾಮಿಲ್, ಅಬ್ದುಲ್ ಅಝೀಝ್ ದಾರಿಮಿ, ಮಾಜಿ ಶಾಸಕರಾದ ಬಿ.ಎಂ. ಫಾರೂಕ್, ಬಿ.ಎ.ಮೊಯ್ದಿನ್ ಬಾವಾ, ನೌಫಾಲ್ ಯೆನೆಪೋಯ ಮಾತನಾಡಿದರು.

ಸಭೆಯಲ್ಲಿ ಮುಮ್ತಾಝ್ ಅಲಿಯ ಪುತ್ರ ಮುಹಮ್ಮದ್ ಮಾಕಿಲ್, ಸಹೋದರ ಶೌಕತ್ ಅಲಿ, ಮಾವ ಬಾವಾ ಅಹ್ಮದ್ ಉಳ್ಳಾಲ, ಕಾರ್ಯಕ್ರಮದ ಸಂಘಟಕರಾದ ಹೈದರ್ ಪರ್ತಿಪ್ಪಾಡಿ, ಇಬ್ರಾಹೀಂ ಕೊಣಾಜೆ, ಇಕ್ಬಾಲ್ ಮುಲ್ಕಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್ ಕೆ. ಅಶ್ರಫ್, ಹನೀಫ್ ಹಾಜಿ ಬಂದರ್, ಬದ್ರುದ್ದೀನ್ ಪಣಂಬೂರು, ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸ ಅದಿ, ಮುಹಮ್ಮದ್ ಹಾಜಿ ಸಾಗರ, ಕೆ.ಎಂ. ಸಿದ್ದೀಕ್ ಮೋಂಟುಗೋಳಿ, ಅಬೂಬಕರ್ ಮೋಂಟುಗೋಳಿ, ಪರ್ವೀಝ್ ಅಲಿ, ಮುಹಮ್ಮದ್ ಯು.ಬಿ., ಡಿ.ಐ.ಅಬೂಬಕರ್ ಕೈರಂಗಳ, ಡಿ.ಎಂ.ಅಸ್ಲಂ, ಅಬ್ದುಲ್ ರಹೀಂ ಮಡಿಕೇರಿ, ಫಕೀರಬ್ಬ ಮಾಸ್ಟರ್, ಶಾಫಿ ನಝೀಮ್ ತಂಳ್, ಅಬ್ದುಲ್ ಖಾದರ್ ಫರಂಗಿಪೇಟೆ, ಇಕ್ಬಾಲ್ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

ಸಂಘಟಕರಾದ ಅಝೀಝ್ ಬೈಕಂಪಾಡಿ ಸ್ವಾಗತಿಸಿದರು. ಉದ್ಯಮಿ ಮನ್ಸೂರ್ ಅಲಿ ಕೋಟೆಗದ್ದೆ ಕಾರ್ಯಕ್ರಮ ನಿರೂಪಿಸಿದರು.










Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News