ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ
ಮಂಗಳೂರು: ಸುರತ್ಕಲ್-ನಂತೂರ್ ಹೆದ್ದಾರಿ ದುರಸ್ತಿಗೊಳಿಸಬೇಕು ಮತ್ತು ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊ ಳಿಸಬೇಕು ಹಾಗೂ ನಂತೂರು ಮೆಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಕೂಳೂರಿನ ಸೇತುವೆ ಸಮೀಪ ನಡೆಸಿದ್ದ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳರ ಮೇಲೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೋಲೀಸರ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ -ದ.ಕ. ಜಿಲ್ಲಾ ಸಮಿತಿಯು ಖಂಡಿಸಿದೆ.
ಸುರತ್ಕಲ್-ನಂತೂರು ಹೆದ್ದಾರಿಯು ಧೂಳು ಹಾಗೂ ಹೊಂಡ, ಗುಂಡಿಗಳಿಂದ ತುಂಬಿ ಹೋಗಿದೆ. ಈ ರಸ್ತೆಯಲ್ಲಿ ಹಲವಾರು ಅಫಘಾತಗಳು ನಡೆದು ಅಮಾಯಕ ಸವಾರರ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ. ಆ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಆದರೂ ಕಾವೂರು ಪೊಲೀಸರು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳರ ಮೇಲೆ ದುರುದ್ದೇಶದಿಂದ ಸ್ವಯಂಪ್ರೇರಿತ ಕೇಸು ದಾಖಲಿಸಿರುವುದು ಖಂಡನೀಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಶ್ಯ ವಹಿಸಿದಾಗ ಪ್ರತಿಭಟಿ ಸುವುದು ಸಂವಿಧಾನ ಬದ್ಧ ಹಕ್ಕು. ಪೊಲೀಸರು ಅದನ್ನು ನಿರಾಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಜನಪರ ಚಳವಳಿಗಾರರ ಮೇಲೆ ವಿನಾಃ ಕಾರಣ ಕೇಸು ಹಾಕಿ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪೊಲೀಸ್ ಇಲಾ ಖೆಯ ಇಂತಹ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರ ಮಧ್ಯ ಪ್ರವೇಶಿಸಿ ಮುನೀರ್ ಕಾಟಿಪಳ್ಳರ ಮೇಲೆ ದುರು ದ್ದೇಶದಿಂದ ಪೊಲೀಸರು ಹಾಕಿರುವ ಕೇಸನ್ನು ತಕ್ಷಣ ಹಿಂಪಡೆಯಬೇಕು. ಜನವಿರೋಧಿ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್‌ರನ್ನು ತಕ್ಷಣದಿಂದಲೇ ವರ್ಗಾಯಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ-ದ.ಕ. ಜಿಲ್ಲಾ ಸಮಿತಿಯ ಸಂಚಾಲಕ ಸದಾಶಿವ ಪಡುಬಿದ್ರೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.