ರೈಲು ಢಿಕ್ಕಿ: ಅಪರಿಚಿತ ಮೃತ್ಯು
Update: 2024-12-14 15:25 GMT
ಮಂಗಳೂರು, ಡಿ.14: ನಗರದ ಪಡೀಲ್-ಜೋಕಟ್ಟೆ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲಿನಡಿಗೆ ಬಿದ್ದು ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ರೈಲಿಗೆ ಸಿಲುಕಿದ ಪರಿಣಾಮ ಈ ವ್ಯಕ್ತಿಯ ಮುಖ ಸಂಪೂರ್ಣವಾಗಿ ಜಜ್ಜಿ ಹೋಗಿದೆ. 5.1 ಅಡಿ ಎತ್ತರದ, ಸಾಧಾರಣ ಮೈಕಟ್ಟಿನ, ಎಣ್ಣೆಗೆಂಪು ಮೈ ಬಣ್ಣದ, ಬಲಗೈಯಲ್ಲಿ ಆರ್‌ಇಕೆಎ ಮತ್ತು ಎಡಗೈನಲ್ಲಿ ಎಂಆರ್‌ಎಸ್‌ಐ ಎಂದು ಹಚ್ಚೆ ಹಾಕಲಾದ ಈ ವ್ಯಕ್ತಿಯ ಎದೆಯ ಮೇಲೆ ಕಪ್ಪು ಮಚ್ಚೆ ಇದೆ. ಸಿಮೆಂಟ್ ಬಣ್ಣದ ಟಿ-ಶರ್ಟ್ ಧರಿಸಿರುವ ಈ ವ್ಯಕ್ತಿಯ ಬಗ್ಗೆ ಮಾಹಿತಿಯಿದ್ದಲ್ಲಿ ರೈಲ್ವೆ ಪೊಲೀಸ್ ಠಾಣೆಯನ್ನು (0824-2220559) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.