ಮಂಗಳೂರು: ಬಿಜೆಪಿ ಪ್ರತಿಭಟನೆಗೆ ಅವಕಾಶ ನೀಡಿದ ಪೊಲೀಸ್ ಆಯುಕ್ತರ ನಡೆಗೆ ಆಕ್ರೋಶ
ಮಂಗಳೂರು: ನಗರ ಜನನಿಬಿಡ ಪ್ರದೇಶವಾದ ಪಿವಿಎಸ್ ಸರ್ಕಲ್ ಬಳಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿಗೆ ಅವಕಾಶ ನೀಡಿದ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್‌ರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಏನಿದು ಕಮಿಷನರ್ ಅಗ್ರವಾಲ್ ? ಬಿಜೆಪಿಗೊಂದು ನ್ಯಾಯ, ಜನಪರ ಸಂಘಟನೆಗಳಿಗೆ ಇನ್ನೊಂದು ನ್ಯಾಯವಾ? ಜನಪರ ಸಂಘಟನೆಗಳ ಧರಣಿ, ಪ್ರತಿಭಟನೆಗಳನ್ನು ನೀವು ನಿಷೇಧಿಸುತ್ತಿದ್ದೀರಿ. ಜನರಲ್ ಡಯರ್ ತರ ಎಫ್‌ಐಆರ್ ಹಾಕಿ ದಮನಿಸುತ್ತಿದ್ದೀರಿ. ಜನವಿರೋಧಿಯಾದ ನಿಮ್ಮನ್ನು ಎತ್ತಂಗಡಿ ಮಾಡಿ ಎಂದು ನಾವು ಆಗ್ರಹಿಸುವುದು ತಪ್ಪೇ? ಮಂಗಳೂರು ಮಿನಿ ವಿಧಾನಸೌಧದ ಮುಂದೆ ಧರಣಿ, ಪ್ರತಿಭಟನೆ ಮಾಡಲು ಅನುಮತಿ ಕೇಳಿದರೆ ನಿರಾಕರಿಸಲಾಗುತ್ತದೆ. ಆದರೆ ಬಿಜೆಪಿ ಮತ್ತು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪಿವಿಎಸ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿರುವುದು ಎಷ್ಟು ಸರಿ? ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ಮುಖಂಡರು ಪ್ರಶ್ನಿಸಿದ್ದಾರೆ.
ನಗರ ಹೊರವಲಯದ 12 ಕಿಮೀ ದೂರದ ಕೂಳೂರಿನಲ್ಲಿ ವಾಹನ ಸಂಚಾರ ಇಲ್ಲದ ಸ್ಥಳದಲ್ಲಿ ಕೇಂದ್ರ ಸರಕಾರದ ಹೆದ್ದಾರಿ ಇಲಾಖೆಯ ನಿರ್ಲಕ್ಷ್ತ, ಬಿಜೆಪಿ ಶಾಸಕ, ಸಂಸದರ ವೈಫಲ್ಯದ ವಿರುದ್ಧ ಧ್ವನಿವರ್ಧಕ ಇಲ್ಲದೆ ಶಾಂತಿಯುತ ಧರಣಿ ನಡೆಸುವುದು ಅಗ್ರವಾಲ್ ಪ್ರಕಾರ ಅಪರಾಧ. ಅದಕ್ಕಾಗಿ ನೋಟೀಸು ಜಾರಿ ಮಾಡಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮನೆಗೆ ಪೊಲೀಸರನ್ನು ಕಳುಹಿಸುವುದು, ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿ ಭೀತಿ ಹುಟ್ಟಿಸುವುದು ಸರೀನಾ? ಬಿಜೆಪಿ ಶಾಸಕರು ರಾಜ್ಯ ಸರಕಾರದ ವಿರುದ್ಧ ಪಿವಿಎಸ್ ಸರ್ಕಲ್‌ನಲ್ಲಿ ಪ್ರತಿಭಟನಾ ಸಭೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದೇ? ಕಮಿಷನರ್ ಅನುಪಮ್ ಅಗ್ರವಾಲ್ ಬಿಜೆಪಿ ಪಕ್ಷ, ಶಾಸಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜನ ವಿರೋಧಿ ಪೊಲೀಸ್ ಕಮಿಷನರ್ ಅಗ್ರವಾಲ್‌ರನ್ನು ವರ್ಗಾವಣೆಗೊಳಿಸಬೇಕು. ಅವರ ಮೇಲಿನ ಆರೋಪಗಳ ಕುರಿತು ತನಿಖೆಗೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.