ಮಂಗಳೂರು| ಕೋಸ್ಟಲ್ ಫ್ರೆಂಡ್ಸ್‌ನಿಂದ ಅನಾಥ ಮಕ್ಕಳಿಗೆ ‘ಸಾಂತ್ವನ ಸಂಚಾರ’ ಕಾರ್ಯಕ್ರಮ

Update: 2024-12-14 17:10 GMT

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ ದ.ಕ.ಜಿಲ್ಲೆಯ ವಿವಿಧ ಕಡೆಗಳಿಂದ 8ರಿಂದ 14 ವರ್ಷ ಪ್ರಾಯದೊಳಗಿನ 85 ಮಂದಿ ಅನಾಥ ಮಕ್ಕಳೊಂದಿಗೆ (ಬಾಲಕ-ಬಾಲಕಿಯರು) ಱಸಾಂತ್ವನ ಸಂಚಾರ ಕಾರ್ಯಕ್ರಮ ವನ್ನು ನಗರ ಮತ್ತು ಹೊರವಲಯದಲ್ಲಿ ವಿಶಿಷ್ಟವಾಗಿ ಶನಿವಾರ ಆಚರಿಸಲಾಯಿತು.

ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಶನಿವಾರ ಬೆಳಗ್ಗೆ ಕೂಳೂರಿನ ಖಾಸಗಿ ಹೊಟೇಲೊಂದರಲ್ಲಿ ಸಾಂತ್ವನದ ಸಂಚಾರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಬಳಿಕ ಮಧ್ಯಾಹ್ನದವರೆಗೆ ಪಿಲಿಕುಳ ನಿಸರ್ಗಧಾಮದ ವೀಕ್ಷಣೆಯ ಭಾಗ್ಯ ನೀಡಲಾಯಿತು. ಪ್ರಾಣಿ ಸಂಗ್ರಹಾಲಯದಲ್ಲಿ ಸುತ್ತಾಟ, ವಿಜ್ಞಾನ ಕೇಂದ್ರ ವೀಕ್ಷಣೆ ಮತ್ತು ತಾರಾಲಯದಲ್ಲಿ 3ಡಿ ವೀಕ್ಷಣೆ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನದ ಬಳಿಕ ಕುತ್ತಾರಿನ ರೆಸಾರ್ಟ್‌ನಲ್ಲಿ ಸುತ್ತಾಡಿಸಲಾಯಿತು. ಅಲ್ಲೇ ವಿವಿಧ ಆಟೋಟ ಸ್ಪರ್ಧೆ ಮತ್ತು ಮನರಂಜನಾ ಚಟುವಟಿಕೆಗಳು, ಮ್ಯಾಜಿಕ್ ಶೋ ನಡೆಸಲಾಯಿತು. ಅಲ್ಲದೆ 85 ಮಕ್ಕಳಿಗೂ ತಲಾ 10 ಸಾವಿರ ರೂ. ಮೌಲ್ಯದ ಆಹಾರದ ಕಿಟ್ ವಿತರಿಸಲಾಯಿತು. ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾರೋಪ ಮಾಡಲಾಯಿತು.

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್, ಸ್ಥಾಪಕ ಸಿರಾಜ್ ಪರ್ಲಡ್ಕ, ಗೌರವಾಧ್ಯಕ್ಷ ಆಸಿಫ್ ಸೂರಲ್ಪಾಡಿ, ಸಾಂತ್ವನ ಸಂಚಾರದ ಸಂಚಾಲಕರಾದ ಸಮೀರ್ ಲಕ್ಕಿಸ್ಟಾರ್, ನಝೀರ್ ಬೆದ್ರೋಡಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹಜ್ಜಾಜ್, ಉಪಾಧ್ಯಕ್ಷರಾದ ಸಾಜಿದ್ ಒಡೆಯರ್, ಅನ್ಸಾರ್ ಕಾಟಿಪಳ್ಳ, ಮಾಜಿ ಅಧ್ಯಕ್ಷ ಇಮ್ತಿಯಾಝ್ ಎಸ್.ಎಂ., ಕೋಶಾಧಿಕಾರಿ ಸಿರಾಜ್ ಎರ್ಮಾಳ್, ಕಾರ್ಯದರ್ಶಿಗಳಾದ ಸರ್ಫ್ರಾಝ್ ವಳಾಲು, ಸಫ್ವಾನ್ ಕರ್ವೇಲು, ಟ್ರಸ್ಟಿಗಳಾದ ಮುನ್ನ ಕಮ್ಮರಡಿ, ಫೈಝಲ್ ಮಠ, ಶೌಕತ್ ಅಲಿ, ಬ್ಯಾರಿ ಝುಲ್ಫಿ, ಸಲಾಂ ಸಮ್ಮಿ, ರಿಯಾಝ್ ಕಣ್ಣೂರು ಸಹಿತ ಸಂಘಟನೆಯ 55ಕ್ಕೂ ಅಧಿಕ ಮಂದಿ ಅನಾಥ ಮಕ್ಕಳ ಜೊತೆಯಾದರು.

ಅನಾಥ ಮಕ್ಕಳ ಕುಟುಂಬಸ್ಥರಿಂದ ಒಪ್ಪಿಗೆ ಪಡೆದು ಅವರ ಮನೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಕರೆತರುವ ಮತ್ತು ಮನೆಗೆ ಮರಳಿ ಕರೆದೊಯ್ಯುವ ಜವಾಬ್ದಾರಿಯನ್ನು ಕೋಸ್ಟಲ್ ಸಂಸ್ಥೆಯೇ ಜವಾಬ್ದಾರಿ ವಹಿಸಿಕೊಂಡಿತ್ತು. ಪೋಷಕರನ್ನು ಕಳೆದುಕೊಂಡು ಕಷ್ಟಕರ ಜೀವನ ನಡೆಸುತ್ತಿರುವ ಮಕ್ಕಳು ಒಂದು ದಿನವಾದರೂ ಖುಷಿಪಡಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.







 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News