ಮಹಾವೀರರ ಸಂದೇಶ ಜಾಗತಿಕವಾಗಿದೆ: ಸ್ಪೀಕರ್ ಯು.ಟಿ. ಖಾದರ್

Update: 2025-04-10 18:54 IST
ಮಹಾವೀರರ ಸಂದೇಶ ಜಾಗತಿಕವಾಗಿದೆ: ಸ್ಪೀಕರ್ ಯು.ಟಿ. ಖಾದರ್
  • whatsapp icon

ಮಂಗಳೂರು: ಭಗವಾನ್ ಶ್ರೀ ಮಹಾವೀರರು ಈ ಜಗತ್ತನ್ನು ಸತ್ಯದ ನೆಲೆಯಲ್ಲಿ ರೂಪಿಸಿ, ಉತ್ತಮ ಸಮಾಜ ರಚಿಸಲು ಪರಿಶ್ರಮಿಸಿದ್ದಾರೆ. ಅವರ ಸಂದೇಶ ಇಡೀ ವಿಶ್ವಕ್ಕೆ ಇಂದು ಪ್ರಸ್ತುತ ವಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೈನ್ ಸೊಸೈಟಿ ಮತ್ತು ಜೈನ್ ಮಿಲನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾವೀರರ ಸಂದೇಶಗಳನ್ನು ಯಾವುದೇ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತಗೊಳಿಸಬಾರದು. ತಾಳ್ಮೆ ಮತ್ತು ಪ್ರೀತಿಯಿಂದ ಸಮಾಜ ವನ್ನು ಕಟ್ಟಬೇಕೆಂಬ ಅವರ ನೀತಿಯು ಮಾದರಿಯಾಗಿದೆ. ಮಹಾಪುರುಷರ ಜಯಂತಿ ಕಾರ್ಯಕ್ರಮ ಯಾವುದೇ ನಿರ್ದಿಷ್ಟ ಜಾತಿ, ಪಂಗಡಗಳಿಗೆ ಸೀಮಿತವಾಗಬಾರದು. ಎಲ್ಲ ವರ್ಗದ ಜನರು ಭಾಗವಹಿಸಿ ಆಚರಿಸಿದರೆ ಮಹಾಪುರುಷರ ಸಂದೇಶವು ಸರ್ವರಿಗೂ ತಲುಪಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

ತಮ್ಮ ಜೀವನವನ್ನೇ ಜನರಿಗೆ ಮಾದರಿಯಾಗಿಸಿ, ಅವರ ಹೃದಯ ಗೆದ್ದ ವ್ಯಕ್ತಿತ್ವ ಮಹಾವೀರರದ್ದಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸತ್ಯ ಮತ್ತು ಅಹಿಂಸೆ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಮಹಾವೀರ ತೋರಿಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಜೈನ್ ಸೊಸೈಟಿ ಗೌರವಾಧ್ಯಕ್ಷ ಸುರೇಶ್ ಬಲ್ಲಾಲ್, ಕಾರ್ಯದರ್ಶಿ ಸಚಿನ್ ಕುಮಾರ್, ಜೈನ್ ಮಿಲನ್ ಅಧ್ಯಕ್ಷ ರತ್ನಾಕರ ಜೈನ್ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.

ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ ಜೈನ್ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ವಂದಿಸಿದರು. ಸುಕುಮಾರ ಬಲ್ಲಾಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News