ಮುಲ್ಕಿ| ಕೊಳ್ನಾಡಿನ ರಿಕ್ಷಾ ಚಾಲಕನ ಮೃತದೇಹ ಕುಂಜತ್ತೂರು ಬಾವಿಯಲ್ಲಿ ಪತ್ತೆ

Update: 2025-04-10 22:52 IST
ಮುಲ್ಕಿ| ಕೊಳ್ನಾಡಿನ ರಿಕ್ಷಾ ಚಾಲಕನ ಮೃತದೇಹ ಕುಂಜತ್ತೂರು ಬಾವಿಯಲ್ಲಿ ಪತ್ತೆ

(ಮುಹಮ್ಮದ್ ಶರೀಫ್)

  • whatsapp icon

ಮಂಗಳೂರು, ಎ.10: ಬುಧವಾರದಿಂದ ಕಾಣೆಯಾಗಿದ್ದ ಮುಲ್ಕಿ ಕೊಳ್ನಾಡಿನ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಅವರ ಮೃತದೇಹವು ಗುರುವಾರ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದ್ದು, ಮಾದಕ ವ್ಯಸನಿಗಳು ಕೊಲೆಗೈದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಮುಹಮ್ಮದ್ ಶರೀಫ್ ತನ್ನ ರಿಕ್ಷಾವನ್ನು ನಗರದ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಬುಧವಾರ ಎಂದಿನಂತೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದಿದ್ದರು. ಆದರೆ ಎಂದಿನಂತೆ ವಾಪಸ್‌ ಮನೆಗೆ ಬಾರದ ಕಾರಣ ಮತ್ತು ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಮನೆ ಮಂದಿ ಆತಂಕ ಗೊಂಡಿದ್ದರು. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಕಾಣೆಯಾಗಿರುವ ಬಗ್ಗೆ ಸಂದೇಶ ರವಾನಿಸಲಾಗಿತ್ತು.

ಗುರುವಾರ ರಾತ್ರಿಯ ವೇಳೆಗೆ ಮುಹಮ್ಮದ್ ಶರೀಫ್‌ರ ಮೃತದೇಹವು ಕರ್ನಾಟಕ-ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲೇ ರಿಕ್ಷಾ ಕೂಡ ಇದೆ. ಬಾವಿಯ ಬಳಿ ರಕ್ತದ ಕಲೆಗಳು ಕಂಡು ಬಂದಿವೆ.

ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿರುವ ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ತಡರಾತ್ರಿಯಾದರೂ ಸರಿ, ಮನೆಗೆ ಮರಳುತ್ತಾರೆ. ಆದರೆ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದ ಮುಹಮ್ಮದ್ ಶರೀಫ್ ಗುರುವಾರ ತಡರಾತ್ರಿಯವರೆಗೂ ಮನೆಗೆ ಮರಳಲಿಲ್ಲ ಎನ್ನಲಾಗಿದೆ. ಹಾಗಾಗಿ ಹುಡುಕಾಟ ನಡೆಸಲಾಯಿತು. ಮುಸ್ಸಂಜೆಯ ವೇಳೆಗೆ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮುಹಮ್ಮದ್ ಶರೀಫ್‌ರ ಮೃತದೇಹವಿರುವ ಬಗ್ಗೆ ಮಾಹಿತಿ ಬಂತು. ಗಾಂಜಾ ವ್ಯಸನಿಗಳು ಮುಹಮ್ಮದ್ ಶರೀಫ್‌ರನ್ನು ಬಾಡಿಗೆಗೆ ಕರೆಕೊಂಡು ಹೋಗಿ ಬಳಿಕ ಅದ್ಯಾವುದೋ ಕಾರಣಕ್ಕೆ ಕೊಲೆಗೈದಿರಬೇಕು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.

ಮುಹಮ್ಮದ್ ಶರೀಫ್‌ರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News