ಪ್ರವಾದಿ ಸಂದೇಶಗಳನ್ನು ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿ: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: 'ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ( ಸ.ಅ.) ಅವರ ಸಂದೇಶಗಳನ್ನು , ಹಿರಿಯರು, ಉಲೆಮಾ -ಉಮರಾಗಳ ಮಾತುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಹೋದಲ್ಲಿ ಸರ್ವಜನರ ಪ್ರೀತಿಗೆ ಪಾತ್ರರಾಗಲು ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ' ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಹೇಳಿದರು.
ಮೂಡುಬಿದಿರೆ ಸಮೀಪದ ಪುಚ್ಚಮೊಗರು ಎಲಿಯಾ ದರ್ಗಾದ ಉರೂಸ್ ಸಮಾರಂಭ ಪ್ರಯುಕ್ತ ಹಮ್ಮಿ ಕೊಂಡಿದ್ದ ಸರ್ವಧರ್ಮ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಜನತೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು, ಹಿಂದೆಲ್ಲಾ ಯಾವುದೇ ಧರ್ಮದ ಹಿರಿಯರು ರಸ್ತೆಯಲ್ಲಿ ಬಂದಾಗ ಎದ್ದು ನಿಂತು ಗೌರವ ಕೊಡಲಾಗುತ್ತಿತ್ತು,ಅದು ನಮ್ಮ ಸಂಸ್ಕೃತಿ, ಆ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇಂದಿನ ಯುವಜನಾಂಗದ್ದು ಎಂದು ಹೇಳಿದ ಅವರು ಯುವಜನಾಂಗ ಸಮಾಜ ಕಟ್ಟುವವರಾಗಬೇಕು- ಸಮಾಜ ಒಡೆಯುವವ ರಾಗಬಾರದು, ಸಮಸ್ಯೆಗಳಿಗೆ ಪರಿಹಾರ ಒದಗಿಸುವವರಾಗಬೇಕು- ಸಮಸ್ಯೆ ಸೃಷ್ಟಿಸುವವರಾಗಬಾರದು ಎಂದರು.
ನಮ್ಮೆಲ್ಲರ ಆಯುಷ್ಯ ಎಷ್ಟು ಕಾಲ ಅಂತ ಯಾರಿಗೂ ಗೊತ್ತಿಲ್ಲ,ಇದ್ದಷ್ಟು ಕಾಲ ಪರಸ್ಪರ ಸಹಬಾಳ್ವೆಯಿಂದ ಶಾಂತಿ, ಸಹನೆಯಿಂದ ಇದ್ದು,ನಾವೂ ನೆಮ್ಮದಿಯಿಂದ ಇದ್ದು ಇನ್ನೊಬ್ಬರೂ ನೆಮ್ಮದಿಯಿಂದ ಇರುವಂತೆ ಬಾಳಬೇಕೆಂದು ಹೇಳಿದ ಖಾದರ್, ಎಲಿಯ ಮಸೀದಿ ಹಾಗೂ ಪರಿಸರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಎಲಿಯಾ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು 'ಎಲ್ಲಿ ಸಂಶಯ ಇರುತ್ತದೋ ಅಲ್ಲಿ ಸೌಹಾರ್ದತೆ ಕಾಣಲು ಸಾಧ್ಯವಿಲ್ಲ, ಎಲ್ಲಿ ಸೌಹಾರ್ದತೆ ಇರುತ್ತದೋ ಅಲ್ಲಿ ಸಂಶಯವಿರಲು ಸಾಧ್ಯವಿಲ್ಲ, ಮಂದಿನ ಯುವ ಜನಾಂಗ ನಮ್ಮಲ್ಲಿರುವ ಸೌಹಾರ್ದತೆಯನ್ನು ಹಿರಿಯರಂತೆಯೇ ಉಳಿಸಿಕೊಂಡು ಜೀವನ ನಡೆಸಬೇಕು ' ಎಂದರು.
ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ,ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ, ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಎಸ್.ಡಿ.ಪಿ.ಐ.ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ,ಸಿ.ಪಿ.ಐ .ಎಂ.ರಾಜ್ಯ ಕಾರ್ಯದರ್ಶಿ ಯಾದವ ಶೆಟ್ಟಿ, ಮೂಡುಬಿದಿರೆ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಇರುವೈಲು ಗ್ರಾ.ಪಂ.ಅಧ್ಯಕ್ಷ ವಲೇರಿಯನ್ ಕುಟಿನ್ಹಾ,ಸದಸ್ಯರಾದ ಪ್ರದೀಪ್ ಪೂಜಾರಿ, ಎಂ.ಎ.ಅಶ್ರಫ್, ಕೆ.ಪಿ.ಸಿ.ಸಿ.ಸದಸ್ಯ ಚಂದ್ರಹಾಸ ಸನಿಲ್, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ,ಕೆ.ಡಿ.ಪಿ.ಸದಸ್ಯ ಪ್ರವೀಣ್ ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ಕುಮಾರ್ ಪೂಜಾರಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಎಸ್.ಡಿ.ಪಿ.ಐ ಮೂಡುಬಿದಿರೆ-ಮೂಲ್ಕಿ ಉಪಾಧ್ಯಕ್ಷ ಆಸಿಫ್ ಕೋಟೆಬಾಗಿಲು, ಗ್ರಾ.ಪಂ.ಮಾಜಿ ಸದಸ್ಯ ಮೈಕಲ್ ನೊರೊನ್ಹ, ವಿಜಯಕುಮಾರ್ ಹೆಗ್ಡೆ, ರಾಜೇಶ್ ಪೂಜಾರಿ ಕಾಳೂರು ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಅಸ್ಸಯ್ಯದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ ತಂಙಳ್ ಬಾರ್ಕೂರು ಅವರು ದುವಾ ನೆರವೇರಿಸಿದರು. ಮಸೀದಿ ಕಮಿಟಿ ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿ,ಉಪಾಧ್ಯಕ್ಷ ಉಸ್ಮಾನ್ ವಂದಿಸಿ ದರು. ಡಿ.ಎ.ಉಸ್ಮಾನ್, ನೌಫಲ್ ಕಾರ್ಯಕ್ರಮ ನಿರೂಪಿಸಿದರು.
ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರ ನೇತೃತ್ವದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರಿಂದ ಮುಖ್ಯ ಪ್ರಭಾಷಣ ನಡೆಯಿತು.
ಮಸೀದಿ ಕಮಿಟಿ ಕಾರ್ಯದರ್ಶಿ ಇಮ್ರಾನ್, ಖಾದರ್,ಕುಞ್ಞಿಮೋನು, ವಸೀರ್,ಇಸ್ಮಾಯಿಲ್ ಮತ್ತಿತರರು ಈ ಸಂದರ್ಭದಲ್ಲಿದ್ದರು.