ಕೇಂದ್ರ ಸರಕಾರದ ವಿರುದ್ಧ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ಎ.11: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ದರವನ್ನು ಏರಿಕೆ ಮಾಡಿ ರುವ ಕೇಂದ್ರ ಸರಕಾರ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಪ್ರತಿಯೊಂದಕ್ಕೂ ಸುಂಕ ವಸೂಲಿ ಮಾಡುವ ಕೇಂದ್ರದ ವಿರುದ್ಧ ಜನಾಂದೋಲನ ಸೃಷ್ಟಿಯಾಗಲೇಬೇಕು. ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಸರಿಯಾದ ಉತ್ತರ ನೀಡಬೇಕು. ರಾಜ್ಯ ಸರಕಾರ ನೀಡುತ್ತಿರುವ 2 ಸಾವಿರ ರೂ. ನಿಂದಾಗಿ ಇಂದು ಮಹಿಳೆಯರು ಸಶಕ್ತರಾಗಿದ್ದು, ಬೆಲೆ ಏರಿಕೆಯ ಸಂಕಷ್ಟದ ನಡುವೆಯೂ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ದೇಶದಲ್ಲಿ ಬೆಲೆ ಏರಿಕೆ ಹೀಗೆ ಮುಂದುವರಿದರೆ ಒಪ್ಪೊತ್ತಿನ ಊಟಕ್ಕೂ ಜನರು ಪರದಾಡಬೇಕಾದೀತು. ಖರ್ಚು ಹೆಚ್ಚಾಗುತ್ತಿದೆ. ಆದರೆ ಜನರ ಅದಾಯವೂ ಹೆಚ್ಚಾಗುತ್ತಿಲ್ಲ. ಇಂದು ಬಡವರು ಮಧ್ಯಮ ವರ್ಗ ದವರು ಬದುಕಲು ಕಷ್ಟವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಅಮೃತ್ ಶೆಣೈ ಆರೋಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಇಂಧನ ಬೆಲೆ ಕೇವಲ 50 ಪೈಸೆ ಹೆಚ್ಚಾದಾಗ ಬೀದಿಗೆ ಬರುತ್ತಿದ್ದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಇಂದು ಕಾಣುತ್ತಿಲ್ಲ. ಕಾಂಗ್ರೆಸ್ ಕಟ್ಟಿ ಬೆಳೆಸಿದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಮಾರಾಟ ಮಾಡಲಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ರಮಾನಾಥ ರೈ, ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಕಾರ್ಪೊರೇಟರ್ ಅಶ್ರಫ್ ಬಜಾಲ್, ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಕಾಂಗ್ರೆಸ್ ನಾಯಕಿ ಮಂಜುಳಾ ನಾಯಕ್, ಯುವ ಕಾಂಗ್ರೆಸ್ ಮುಖಂಡರಾದ ನವಾಝ್ ನರಿಂಗಾನ, ರಫೀಕ್ ಕಣ್ಣೂರು, ಸಮರ್ಥ ಭಟ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.