ಮೆಸ್ಕಾಂಗೆ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಮನವಿ

ಮಂಗಳೂರು, ಎ.11: ಬಜಾಲ್ ಜಲ್ಲಿಗುಡ್ಡೆ (ಜಾರಬಳಿ) ಪ್ರದೇಶದಲ್ಲಿ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಾಪಿಸಲು, ಕಟ್ಟಪುನಿ ಅಂಗನವಾಡಿ ಬಳಿ ಹಾದು ಹೋಗಿರುವ ಅಪಾಯಕಾರಿ ಸರ್ವಿಸ್ ವಿದ್ಯುತ್ ತಂತಿ ಸರಿಪಡಿಸಲು ಒತ್ತಾಯಿಸಿ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನೀಯರ್ ಸತೀಶ್‌ರಿಗೆ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯು ಶುಕ್ರವಾರ ಮನವಿ ಸಲ್ಲಿಸಿತು.
ಮಂಗಳೂರಿನ ಅಳಪೆ ದಕ್ಷಿಣ ವಾರ್ಡಿನ ಪಕ್ಕಲಡ್ಕ ಬಸ್ ನಿಲ್ದಾಣದಿಂದ ಆರಂಭಗೊಂಡು ಬಜಾಲ್ ವಾರ್ಡಿನ ಜಾರ ಬಳಿ ಪ್ರದೇಶದವರೆಗೂ ನೂರಾರು ಮನೆಗಳಿವೆ. ಈ ಎಲ್ಲಾ ಮನೆಗಳಿಗೆ ಸಂಪರ್ಕಿಸುವ ವಿದ್ಯುತ್ ಜಾಲವನ್ನು ನಿಯಂತ್ರಿಸಲು ಒಂದೇ ಒಂದು ಟ್ರಾನ್ಸ್‌ಫಾರ್ಮರ್ ಇದೆ. ಈ ಪರಿಸರದಲ್ಲಿ ಮನೆಗಳ ಸಂಖ್ಯೆ ಅಧಿಕವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆಗಳು ಕೂಡಾ ಏರಿಕೆಯಾಗ ತೊಡಗಿದೆ. ಪರಿಣಾಮ ಆಗಾಗ ವಿದ್ಯುತ್ ಕಡಿತ ಮತ್ತು ಟ್ರಾನ್ಸ್‌ಫಾರ್ಮರ್ ವೈಫಲ್ಯಗಳು ಉಂಟಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಡಿವೈಎಫ್‌ಐ ಮುಖಂಡ, ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್, ಅಧ್ಯಕ್ಷ ಅಯಾಝ್ ಜಲ್ಲಿಗುಡ್ಡೆ, ಕೋಶಾಧಿಕಾರಿ ಕಮಲಾಕ್ಷ ಬಜಾಲ್, ದೀಪಕ್ ಬಜಾಲ್, ಜಯಪ್ರಕಾಶ್ ಜಲ್ಲಿಗುಡ್ಡೆ ನಿಯೋಗದಲ್ಲಿದ್ದರು.