ರೈತರಂತೆ ಮೀನುಗಾರರೂ ಅನ್ನದಾತರು: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು, ಎ.11: ರೈತರಂತೆ ಮೀನುಗಾರರು ಕೂಡ ಅನ್ನದಾತರು. ಅವರದ್ದು ಕಷ್ಟದ ಬದುಕು. ತಮ್ಮ ಮಕ್ಕಳ ಶಿಕ್ಷಣಕ್ಕೆ ಮೀನುಗಾರರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು ಮೀನುಗಾರ ಮಹಿಳೆಯರ ಮೀನುಮಾರಾಟ ಮಂಡಳಿಯ ಆಶ್ರಯದಲ್ಲಿ ಶುಕ್ರವಾರ ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಶ್ರೇಷ್ಠ ಸಂಸ್ಕೃತಿ, ಆಚಾರ ವಿಚಾರಗಳ ಮೂಲಕ ಮೀನುಗಾರರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅನೇಕ ಅನಾನುಕೂಲತೆಗಳ ನಡುವೆಯೂ ಕಠಿನ ಶ್ರಮದಿಂದ ಮೀನು ಮಾರಾಟ ಮಾಡಿ ತಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಮೀನುಗಾರ ಮಹಿಳೆಯರು ಇಡೀ ಜಗತ್ತಿಗೆ ಸ್ವಾಭಿ ಮಾನದ ಪಾಠ ಹೇಳಿಕೊಟ್ಟಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮೀನುಗಾರ ಮಹಿಳೆಯರು ಪ್ರೇರಣೆ ಎಂದು ಸ್ಪೀಕರ್ ನುಡಿದರು.
ಮೀನುಗಾರಿಕೆಯ ಅಭಿವೃದ್ಧಿಗೆ ರಾಜ್ಯದ ದ.ಕ, ಉ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮೀನುಗಾರಿಕಾ ನೀತಿಯ ಅಗತ್ಯವಿದೆ ಎಂದು ಯು.ಟಿ.ಖಾದರ್ ಹೇಳಿದರು.
3ನೇ ಹಂತದ ಕಾಮಗಾರಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಮೀನುಗಾರಿಕಾ ಜೆಟ್ಟಿಯ 3ನೇ ಹಂತದ ಕಾಮಗಾರಿ ನಡೆಯಲಿದೆ. ಈ ಹಿಂದೆ ಮಂಜೂರಾಗಿ ಬಾಕಿ ಇರುವ 260 ಕೋ.ರೂ. ವೆಚ್ಚದ ಕಾಮಗಾರಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಗಮನ ಹರಿಸಬೇಕಾಗಿದೆ. ಮೀನು ಮಾರುಕಟ್ಟೆ ನಿರ್ಮಾ ಣವೂ ಸೇರಿದಂತೆ ಮೀನುಗಾರರಿಗೆ ಅಗತ್ಯವಿರುವ ಸೌಲಭ್ಯ, ಯೋಜನೆಗಳ ಬಗ್ಗೆ ಮೀನುಗಾರರು ಒಮ್ಮತದಿಂದ ನಿರ್ಧಾರ ತೆಗೆದುಕೊಂಡು ತಿಳಿಸಿದರೆ ಅದರ ಅನುಷ್ಠಾನಕ್ಕೆ ಬದ್ದ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಮಂಗಳೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ, ಮಾಜಿ ಮೇಯರ್‌ಗಳಾದ ಮನೋಜ್ ಕುಮಾರ್ ಕೋಡಿಕಲ್, ದಿವಾಕರ ಪಾಂಡೇಶ್ವರ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕಿ ವಾಣಿ ಜಿ.ಸಾಲಿಯಾನ್, ಉದ್ಯಮಿ ಗಣೇಶ್ ಶೆಟ್ಟಿ, ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಯ ಅಧ್ಯಕ್ಷ ಬೇಬಿ ಎಸ್.ಕುಂದರ್, ಸಂಚಾಲಕರಾದ ಭಾಸ್ಕರ್‌ಚಂದ್ರ ಶೆಟ್ಟಿ, ಎಂ.ಮೋಹನ್ ಕುಲಾಲ್ ಉಪಸ್ಥಿತರಿದ್ದರು. ತೃಪ್ತಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಮೀನುಗಾರ ಮಹಿಳೆಯರು ಹಾಗೂ ಮೀನುಗಾರಿಕಾ ಉದ್ಯಮಕ್ಕೆ ನೆರವಾದ ಚಾಲಕರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಸೀವೀಡ್ ಅಧ್ಯಯನ : ಬ್ರಿಜೇಶ್ ಚೌಟ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮಾತನಾಡಿ, ಮೀನುಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ರಾಜ್ಯಸರಕಾರ ಸಲ್ಲಿಸುವ ಪ್ರಸ್ತಾವನೆಗಳಿಗೆ ಕೇಂದ್ರ ಸರಕಾರದ ಅನು ಮೋದನೆ ಒದಗಿಸಲಾಗುವುದು. ನಮ್ಮ ರಾಜ್ಯದಲ್ಲಿಯೂ ಸೀವೀಡ್(ಕಡಲ ಕಳೆ) ಬೆಳೆಸುವ ಸಾಧ್ಯತೆಯ ಕುರಿತು ಅಧ್ಯಯನ ಮಾಡುವ ಅಗತ್ಯವಿದ್ದು ಅದಕ್ಕೆ ಕೇಂದ್ರ ಸರಕಾರ ಬೆಂಬಲ ನೀಡಲಿದೆ. ಈ ಬಗ್ಗೆ ಮೀನುಗಾರರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
