ನಂದಿಗುಡ್ಡ: ಮಗುಚಿದ ರಿಕ್ಷಾ; ಚಾಲಕ ಮೃತ್ಯು
Update: 2025-04-11 22:46 IST

ಮಂಗಳೂರು, ಎ.11: ನಗರದ ನಂದಿಗುಡ್ಡೆ ಕೋಟಿ ಚೆನ್ನಯ್ಯ ಸರ್ಕಲ್ ಬಳಿಯ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿದ ರಿಕ್ಷಾ ಮಗುಚಿದ ಪರಿಣಾಮ ಅದರ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತಪಟ್ಟ ರಿಕ್ಷಾ ಚಾಲಕನನ್ನು ರವಿ ಕೆ.ಪೂಜಾರಿ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸುಮಾರು 5:30ಕ್ಕೆ ನಂದಿಗುಡ್ಡ ಕೋಟಿ ಚೆನ್ನಯ್ಯ ಸರ್ಕಲ್‌ನಿಂದ ಅತ್ತಾವರ ಕಡೆಗೆ ರವಿ ಪೂಜಾರಿ ಚಲಾಯಿಸುತ್ತಿದ್ದ ರಿಕ್ಷಾ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ಅದರ ಹಿಂದಿದ್ದ ಮತ್ತೊಂದು ರಿಕ್ಷಾದ ಚಾಲಕ ದಿನೇಶ್ ಸಾರ್ವಜನಿಕರ ಸಹಕಾರದಿಂದ ಗಾಯಾಳು ರವಿ ಪೂಜಾರಿಯನ್ನು ಆಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು ಗಾಯಾಳು ರವಿ ಪೂಜಾರಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ದಿನೇಶ್ ನೀಡಿದ ದೂರಿನಂತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.