ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ: ನೂತನ ಕಟ್ಟಡ ಉದ್ಘಾಟನೆ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ಉಳ್ಳಾಲ: ಸಮುದಾಯ ಆರೋಗ್ಯ ಕೇಂದ್ರವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು ,ಇದು ಸಮುದಾಯ ಆರೋಗ್ಯ ಕೇಂದ್ರವೇ ಹೊರತು ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಅಲ್ಲ ಎಂಬುದನ್ನು ಜನರು ಮನಗಾಣಬೇಕು ಎಂದು ವಿಧಾನ ಸಭೆ ಸಭಾಧ್ಯಕ್ಷ ಯು. ಟಿ. ಖಾದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರ್ ಘಟಕ ದ.ಕ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ “ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಕಟ್ಟಡದ ಉದ್ಘಾಟನೆ, ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಒಂದು ಯೋಜನೆ ಹಾಕಿಕೊಂಡಾಗ ಅದರಲ್ಲಿ ಲೋಪ ಹುಡುಕದೆ ಅದನ್ನು ಅಚ್ಚುಕಟ್ಟಾಗಿ ಮಾಡುವ ಸದುದ್ದೇಶ ಹೊಂದಿದರೆ ಅದಕ್ಕೆ ಬೇರೆ ಬೇರೆ ರೂಪದಲ್ಲಿ ದಾನಿಗಳು ಸಹಕರಿಸುತ್ತಾರೆ ಎಂಬುದಕ್ಕೆ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಿಪಿಸಿಎಲ್ ಸಂಸ್ಥೆಯ ರಾಜ್ಯ ಮುಖ್ಯಸ್ಥೆ ನೀರಾ ಸಿಂಗ್ ಅವರು 1.59ಕೋಟಿ ರೂ. ನೀಡಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಮಾತನಾಡಿ, ಮಾದರಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡಿದ್ದು ಆರೋಗ್ಯ ಕಾಪಾಡಿ ಕೊಳ್ಳಲು ಇಂತಹ ವ್ಯವಸ್ಥೆ ಮುಖ್ಯವಾಗಿದ್ದು ಸೇವೆ ಹಾಗೂ ಸಿಬ್ಬಂದಿ ಕೂಡ ಅಗತ್ಯವಾಗಿದ್ದು ನೂರಕ್ಕೆ ನೂರು ಭರ್ತಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರಕ್ಕೆ ದೊಡ್ಡ ಅನುದಾನ ನೀಡಿದ ಎಲ್‌ಪಿಜಿ ಬಿಪಿಸಿಎಲ್ ಸಂಸ್ಥೆ ಮುಖ್ಯಸ್ಥೆ ನೀರಾ ಸಿಂಗ್, ಸಮುದಾಯ ಆರೋಗ್ಯ ಕೇಂದ್ರ ಉಸ್ತುವಾರಿ ವಹಿಸಿರುವ ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯು. ಅಬ್ದುಲ್ಲಾ ಕುಂಞಿ,
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಪಿಸಿಎಲ್ ಸಂಸ್ಥೆಯ ಅಧಿಕಾರಿ ಫರ್ವೇಝ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತ ಡಿ.ಎಸ್. ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ನಗರಸಭೆಯ ಅಧ್ಯಕ್ಷೆ ಶಶಿಕಲಾ ಉಳ್ಳಾಲ, ಮಾಜಿ ಮಂಡಲ ಪ್ರಧಾನ ರಶೀದ್ ಹಾಜಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆ ರ್ ಸಿ ಎಚ್ ಅಧಿಕಾರಿ ಡಾ. ರಾಜೇಶ್ ಬಿ. ವಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್, ಉಳ್ಳಾಲ ನಗರಸಭೆ ಆಯುಕ್ತ ಮತ್ತಡಿ ಆಡಳಿತ ವೈದ್ಯಾಧಿಕಾರಿ ನಿಖಿಲ್, ಮಾರುತಿ ಯುವಕ ಮಂಡಲದ ವರದರಾಜ್ ಬಂಗೇರ ಹಾಗೂ ಸುಧೀರ್ ಪುತ್ರನ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
ಡಾ. ಹೆಚ್.ಆರ್. ತಿಮ್ಮಯ್ಯ ಸ್ವಾಗತಿಸಿದರು. ಅಬ್ದುಲ್ ರಝಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೂತನ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ, ಶವಾಗಾರ ಉದ್ಘಾಟನೆ ಮತ್ತು ಶವ ಶೀತಲೀಕರಣ ಪೆಟ್ಟಿಗೆ ಹಸ್ತಾಂತರ, ನೂತನ ಪುನರ್ವಸತಿ ಕೇಂದ್ರದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಆಯುಷ್ ಆಸ್ಪತ್ರೆಯ ಮೊದಲನೆ ಮಹಡಿ ಕಾಮಗಾರಿ ಶಂಕುಸ್ಥಾಪನೆ ನಡೆಯಿತು.