ನಾವು ಪಡೆದ ಶಿಕ್ಷಣ ಸಮಾಜಕ್ಕೆ ಉಪಯೋಗವಾಗಬೇಕು: ರಘುವೀರ್

ಮಂಗಳೂರು: ಅಂಬೇಡ್ಕರ್ ಬಹಳ ಕಷ್ಟ ಪಟ್ಟು ಓದಿ ಸಮಾಜಕ್ಕೆ ಬೆಳಕಾದವರು. ಬಾಬಾ ಸಾಹೇಬ್ ಅಂಬೇಡ್ಕರ್ ಯುವಜನಾಂಗಕ್ಕೆ ಮಾದರಿ. ಅದೇ ರೀತಿ ನಾವು ಪಡೆದ ಶಿಕ್ಷಣ ಸಮಾಜಕ್ಕೆ ಅನುಕೂಲ ಕರವಾಗಿರಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸುಶಿಕ್ಷಿತರಾಗಬೇಕು ಎಂದು ದಕ್ಷಿಣ ಕನ್ನಡ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ ಹೇಳಿದರು.
ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವ ಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ. ಶಿಕ್ಷಣ ಪಡೆದುಕೊಳ್ಳಲು ಬಡತನ ಎಂದೂ ಅಡ್ಡಿಯಾಗುವುದಿಲ್ಲ, ಜ್ಞಾನದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಶ್ರೇಷ್ಠವ್ಯಕ್ತಿಗಳ ಮಹಾನ್ ಸಾಧನೆಗಳನ್ನು ಯುವಕರು ಅಭ್ಯಸಿಸಿ, ಅಳವಡಿಸಿಕೊಂಡರೆ ಸಮಾಜವನ್ನು ಉತ್ತಮ ಮಾರ್ಗದೆಡೆಗೆ ತೆಗೆದುಕೊಂಡು ಹೊಗಬಹುದು ಎಂದು ರಘುವೀರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೋ. ಗಣಪತಿ ಗೌಡ ಮಾತನಾಡಿ, “ಅಂಬೇಡ್ಕರ್ ತಮ್ಮ ಅಗಾಧವಾದ ಪಾಂಡಿತ್ಯದ ಮೂಲಕ ಪ್ರಪಂಚ ದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ನಿರ್ಮಿಸಿದ್ದಾರೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅಂಬೇಡ್ಕರ್ ಪ್ರಯತ್ನ ಪಟ್ಟಿದ್ದಾರೆ ಹಾಗು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಂಬೇಡ್ಕರ್ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ, ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟವಾಗಬೇಡ”, ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕುರಿತು ವಿದ್ಯಾರ್ಥಿಗಳು ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಚಾಲಕ ಪ್ರೊ. ರಾಮಕೃಷ್ಣ ಬಿ.ಎಂ, ಗ್ರಂಥಪಾಲಕಿ ಡಾ. ವನಜಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸುರೇಶ್ ಮತ್ತು ಡಾ. ಗಾಯತ್ರಿ ಎನ್, ಆಂತರಿಕ ಗುಣಮಟ್ಟ ಖಾತರಿಕೋಶದ ಡಾ. ಸಿದ್ದರಾಜು ಎಂ.ಎನ್ ಇದ್ದರು. ಪ್ರೊ. ರಾಮಕೃಷ್ಣ ಬಿ.ಎಂ ಸ್ವಾಗತಿಸಿದರು.