ಅಂಬೇಡ್ಕರ್ ಆದರ್ಶಗಳು ಸರ್ವರಿಗೂ ಮಾದರಿ: ಮಹಾದೇವ ಸ್ವಾಮಿ ಪ್ರಸನ್ನ

ಮಂಗಳೂರು: ಸಾಮಾಜಿಕ ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನ ದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ, ವಿಶೇಷವಾಗಿ ಮಹಿಳೆಯರು ಮತ್ತು ದೀನದಲಿತರ ಉನ್ನತಿಗಾಗಿ ಶ್ರಮಿಸಿದ ಕಾಂತಿ ಪುರುಷರು.ಅವರ ಆದರ್ಶಗಳು ಎಲ್ಲ ವರ್ಗದ ಜನರಿಗೂ ಮಾದರಿಯಾಗಿವೆ ಎಂದು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಕೆ. ಎಂ.ಮಹಾದೇವ ಸ್ಪಾಮಿ ಪ್ರಸನ್ನ ಅವರು ಹೇಳಿದ್ದಾರೆ.
ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮಂಗಳೂರು ಸಹಭಾಗಿತ್ವದೊಂದಿಗೆ ಮಂಗಳೂರಿನ ಮೆಸ್ಕಾಂ ಕಾರ್ಪೋರೆಟ್ ಕಚೇರಿ ಯಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರ ಕೊಡುಗೆಗಳು ವಿಶಾಲ ಮತ್ತು ವೈವಿಧ್ಯಮಯವಾಗಿದ್ದು ಅವರ ತತ್ವ, ವಿಚಾರಧಾರೆಗಳು ನಮಗೆ ದಾರಿದೀಪವಾಗಲಿ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಿಂತಕ ಹಾಗೂ ಕರ್ಣಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಟ ಪ್ರೊ. ಡಾ. ಕಾಳೇಗೌಡ ನಾಗವಾರ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವೀಯತೆ, ನ್ಯಾಯ ಮತ್ತು ಘನತೆಯ ತತ್ವಗಳ ಆಧಾರಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದರು.
ಸಾಮಾಜಿಕ ನ್ಯಾಯ , ಮಹಿಳಾ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದ ಅವರು ಜ್ಞಾನದ ಆಗರವಾಗಿದ್ದರು. ಅದುದರಿಂದಲೇ ಅವರು ಹುಟ್ಟಿದ ದಿನವನ್ನು ವಿಶ್ವ ಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಮಂಗಳೂರಿನಲ್ಲಿ ಕುದ್ಮುಲ್ ರಂಗರಾವ್ ಅವರು ಕೂಡಾ ದೀನದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಮಾಹಾನ್ ಮಾನವತಾವಾದಿಯಾಗಿದ್ದರು ಎಂದರು.
ಮುಖ್ಯ ಅರ್ಥಿಕ ಅಧಿಕಾರಿ ಬಿ. ಹರಿಶ್ಚಂದ್ರ , ಅರ್ಥಿಕ ಸಲಹೆಗಾರ ಮುರಳೀಧರ ನಾಯಕ್, .ಪ್ರಧಾನ ವ್ಯವಸ್ಥಾಪಕರಾದ ಹರೀಶ್ ಕುಮಾರ್ , ಮುಖ್ಯ ಇಂಜಿನಿಯರ್ ರವಿಕಾಂತ್ ಆರ್.ಕಾಮತ್, ಮೆಸ್ಕಾಂ ಜಾಗೃತದಳ ಪೊಲೀಸ್ ಉಪಅಧೀಕ್ಷಕ ಟಿ.ಆರ್ .ಜೈಶಂಕರ್, ಕವಿಪ್ರನಿನಿ ಅಧೀಕ್ಷಕ ಇಂಜಿನಿಯರ್ ಚೈತನ್ಯ,ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ತೇಜಸ್ವಿ ಬಿ.ಆರ್, ಎಚ್.ಎಸ್. ಗುರುಮೂರ್ತಿ, ನಿತೀಶ್, ಪುಷ್ಪರಾಜ್ ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮಂಗಳೂರು ಇದರ ಉಪಾಧ್ಯಕ್ಷ ಡಿ. ಶ್ರೀನಿವಾಸಪ್ಪ ಪ್ರಸ್ತಾವನೆಗೈದರು, ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ ಶೆಟ್ಟಿ ನಿರೂಪಿಸಿದರು. ರಘುರಾಮ ಶೆಟ್ಟಿ ವಂದಿಸಿದರು.