ಆಟೋ ರಿಕ್ಷಾ ಚಾಲಕ ಶರೀಫ್ ಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಎಸ್‌ಡಿಟಿಯು ಆಗ್ರಹ

ಮಂಗಳೂರು, ಎ.16: ಮುಲ್ಕಿ ಕೊಳ್ನಾಡು ನಿವಾಸಿ ಹಾಗೂ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಹತ್ಯಾ ಪ್ರಕರಣವನ್ನು ಖಂಡಿಸಿ ಡೆಮೊಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು)ಮಂಗಳೂರು ನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ನಗರದ ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಸಿದ ರಿಕ್ಷಾ ಚಾಲಕರು ಕೇರಳದ ಕುಂಜತ್ತೂರಿನಲ್ಲಿ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಂದು ಬಾವಿಗೆ ಎಸೆದು ಪರಾರಿಯಾಗಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದರು.
ಮಂಗಳೂರು ನಗರ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್‌ನ ಅಧ್ಯಕ್ಷ ಇಲ್ಯಾಸ್ ಬೆಂಗರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದ.ಕ.ಜಿಲ್ಲಾ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ದ.ಕ ಜಿಲ್ಲಾ ಆಟೋ ಚಾಲಕರ ಮಾಲಕರ ಒಕ್ಕೂಟದ ಅಧ್ಯಕ್ಷ ಭರತ್ ಕುಮಾರ್, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಎಸ್‌ಡಿಟಿಯು ಕರ್ನಾಟಕ ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿ ಪೇಟೆ, ಎಸ್‌ಡಿಟಿಯು ಮಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಇರ್ಫಾನ್ ಕಾನ ಮತ್ತು ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್, ಎಸ್‌ಡಿಟಿಯು ಮಂಗಳೂರು ಸೌತ್ ಏರಿಯ ಸಮಿತಿ ಅಧ್ಯಕ್ಷ ಇಕ್ಬಾಲ್ ಬಿ.ಪಿ, ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ, ರಿಯಾಝ್ ಮಲ್ಲೂರು ಅವರು ರಿಕ್ಷಾ ಚಾಲಕ ಮುಹಮ್ಮದ್ ಶರೀಫ್‌ರನ್ನು ಕ್ಷುಲ್ಲಕ ಕಾರಣಕ್ಕಾಗಿ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ನೈಜ ಕಾರಣ ಬೇರೆಯೆ ಇರಬಹುದು. ಈಗಾಗಲೇ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಆದುದರಿಂದ ಈಗಾಗಲೇ ಬಂಧಿತನಾಗಿರುವ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಸೂಕ್ತ ತನಿಖೆ ನಡೆಸಬೇಕು. ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಿಕ್ಷಾಚಾಲಕರು ತಮ್ಮ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ತಮ್ಮಲ್ಲಿಗೆ ಬರುವ ಕೆಲವು ಪ್ರಯಾಣಿಕರ ಬಗ್ಗೆಯೂ ಎಚ್ಚರ ವಹಿಸಬೇಕು. ದೂರಕ್ಕೆ ಬಾಡಿಗೆ ಹೋಗುವಾಗ ತಮ್ಮ ಗ್ರೂಪ್‌ನವರಿಗೆ ಮಾಹಿತಿ ನೀಡಬೇಕು ಎಂದರು.
ರಿಕ್ಷಾ ಚಾಲಕರು ಎಲ್ಲರೂ ದುಡಿಯುವ ವರ್ಗ, ನಮ್ಮಲ್ಲಿ ಜಾತಿ ಮತ ಎನ್ನುವ ಭೇದ ಇಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆಯ ಬಳಿಕ ರಿಕ್ಷಾ ಚಾಲಕರು ಮೃತ ಚಾಲಕನ ಕುಟುಂಬಕ್ಕೆ ಸರಕಾರ ದೊಡ್ಡ ಮೊತ್ತದ ಪರಿಹಾರ ಒದಗಿಸಬೇಕು.ರಾತ್ರಿ ಹಗಲೆನ್ನದೆ ದುಡಿಯುವ ರಿಕ್ಷಾ ಚಾಲಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.