ನವೆಂಬರ್-ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸಮುದ್ರ ಮೀನುಗಾರಿಕಾ ಸಮೀಕ್ಷೆ

ಮಂಗಳೂರು, ಎ.17: ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5ನೆಯ ರಾಷ್ಟ್ರೀಯ ಮೀನುಗಾರಿಕಾ ಸಮೀಕ್ಷೆ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಮೀನುಗಾರರ ಮನೆಗಳ ಗಣತಿ ನಡೆಯಲಿದೆ. ಈ ಸಮೀಕ್ಷೆಯು ರಾಷ್ಟ್ರದಾದ್ಯಂತ ಮೀನುಗಾರರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ದಾಖಲಾತಿ ಮಾಡುವುದಲ್ಲದೆ ರಾಷ್ಟ್ರೀಯ ಮೀನುಗಾರಿಕೆಗೆ ಬೆನ್ನೆಲುಬಾಗಿ ನಿಂತಿರುವ ಮೂಲ ಸೌಕರ್ಯಗಳ ನಕ್ಷೆಯನ್ನು ಚಿತ್ರಿಸಲು ಉದ್ದೇಶಿಸಿದೆ.
ಗಣತಿ ಎಣಿಕೆದಾರರನ್ನು ಸ್ಥಳೀಯ ಮೀನುಗಾರಿಕಾ ಸಮುದಾಯಗಳಿಂದ ಆಯ್ಕೆ ಮಾಡಲು ಉದ್ದೇಶಿಸ ಲಾಗಿದೆ. ನವೆಂಬರ್- ಡಿಸೆಂಬರ್‌ನಲ್ಲಿ 45 ದಿನಗಳ ಸಮೀಕ್ಷೆ ನಡೆಯಲಿದೆ. ಅದಕ್ಕಾಗಿ ಎಣಿಕೆದಾರರು ಪ್ರತಿ ಮೀನುಗಾರರ ಮನೆಗೆ ಆಗಮಿಸಲಿದ್ದಾರೆ. ಕೇಂದ್ರೀಯ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಈ ಸಮೀಕ್ಷೆಯನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆಯಡಿ ಪ್ರಾಯೋ ಜಿಸಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷದ್-ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಸ್ಥೆಯು ಒಂಬತ್ತು ಕರಾವಳಿ ರಾಜ್ಯಗಳಲ್ಲಿನ ಸಮೀಕ್ಷೆಯ ಉಸ್ತುವಾರಿ ವಹಿಸಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತೀಯ ಮೀನುಗಾರಿಕೆ ಸಮೀಕ್ಷಾ ಸಂಸ್ಥೆ (ಫಿಶರೀಸ್ ಸರ್ವೇ ಆಫ್ ಇಂಡಿಯಾ) ನೋಡಲ್ ಏಜೆನ್ಸಿಯಾಗಿ ನೇಮಕವಾಗಿದೆ.
ಈ ದಾಖಲಾತಿಕಾರ್ಯ ನಡೆಸುವ ಸಲುವಾಗಿ ತಯಾರಿಕಾ ಹಂತಗಳನ್ನು ಅನುಸರಿಸಲಾಗುತ್ತಿದ್ದು, ಉನ್ನತ ಮಟ್ಟದ ಸಮಾವೇಶವು ಕೇಂದ್ರ ಸರಕಾರದ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ ನೀತುಕುಮಾರಿ ಪ್ರಸಾದ್ ಸಮ್ಮುಖದಲ್ಲಿ ನಡೆದಿದೆ. ಸಮೀಕ್ಷಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪ್ರಥಮ ಹಂತದ ಕ್ರಮಗಳು ಹಾಗು ನಿರೀಕ್ಷಿತ ಹಂತಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಚರ್ಚೆಯಲ್ಲಿ ಮೀನುಗಾರಿಕಾ ಮಂಡಳಿಯ ಹಿರಿಯ ಅಧಿಕಾರಿಗಳು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕಾ ಇಲಾಖೆಯ ಪ್ರತಿನಿಧಿಗಳು, ಮೀನುಗಾರಿಕಾ ಸಮೀಕ್ಷಾ ಸಂಸ್ಥೆ ಹಾಗು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಈ ಸಮೀಕ್ಷೆಯು ಮೀನುಗಾರಿಕೆ ಸಮುದಾಯಗಳ ಜನಸಂಖ್ಯೆ, ಅವರ ಜೀವನೋಪಾಯಗಳನ್ನು ದಾಖಲಿಸುವುದಲ್ಲದೆ ಮೀನುಗಾರಿಕಾ ಮೂಲ ಸೌಕರ್ಯಗಳಾದ ವಿವಿಧ ಮೀನುಗಾರಿಕಾ ದೋಣಿಗಳು, ಮೀನುಗಾರಿಕೆಯಲ್ಲಿ ಉಪಯೋಗಿಸುವ ಸಾಧನಗಳು, ಬಲೆಗಳ ವಿಧಗಳು, ಬಂದರುಗಳು, ಮೀನು ಸಂಸ್ಕರಣಾ ಘಟಕಗಳು ಮತ್ತು ಶೀತಲ ಶೇಖರಣಾ ಘಟಕಗಳ ಎಣಿಕೆ ಮಾಡಲಾಗುತ್ತದೆ. ಎಂದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಗ್ರಿನ್ಸನ್ ಜಾರ್ಜ್ ತಿಳಿಸಿದ್ದಾರೆ.