ರೈತರ ಕೃಷಿಭೂಮಿ ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗುತ್ತಿದೆ : ಯಾದವ ಶೆಟ್ಟಿ

ಮಂಗಳೂರು: ಗೇಣಿದಾರ ರೈತರು, ಬೀಡಿ, ಹೆಂಚು ಕಾರ್ಮಿಕರ ಸಮರಶೀಲ ಚಳವಳಿಗಳಿಂದ ಖ್ಯಾತಿ ಪಡೆದಿದ್ದ ಉಳ್ಳಾಲ ತಾಲೂಕಿನಲ್ಲಿ ಇಂದು ಜನ ಸಾಮಾನ್ಯರಿಗೆ ಧ್ವನಿಯೇ ಇಲ್ಲದಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇರುವ ಮನೆ, ನಿವೇಶನ ರಹಿತರಿಗೆ ಕಳೆದ ಒಂದೂವರೆ ದಶಕದಿಂದ ಒಂದು ವಸತಿ ಯೋಜನೆಯೂ ಜಾರಿಯಾಗಿಲ್ಲ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಹೇಳಿದ್ದಾರೆ.
ಅವರು, ಸಿಪಿಐಎಂ ಉಳ್ಳಾಲ ಹಾಗೂ ಮುಡಿಪು ವಲಯ ಸಮಿತಿಗಳು ಎಪ್ರಿಲ್ 29ರಂದು ದೇರಳೆಕಟ್ಟೆಯಲ್ಲಿ ಹಮ್ಮಿಕೊಂಡಿರುವ ‘ಜನಾಗ್ರಹ ಸಮಾವೇಶ’ದ ಪ್ರಚಾರಾರ್ಥ ನಡೆಯುತ್ತಿರುವ ಎರಡನೇ ದಿನದ ವಾಹನ ಜಾಥಾವನ್ನು ಕುತ್ತಾರ್ ಜಂಕ್ಷನ್‌ನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಂಚಾಯತ್‌ಗಳು ಕನಿಷ್ಟ ನಿವೇಶನರಹಿತರ ಪಟ್ಟಿಗಳನ್ನೂ ಸಿದ್ದಪಡಿಸಿಲ್ಲ ಎಂಬುದು ಇಲ್ಲಿನ ಜನಪ್ರತಿನಿಧಿ ಗಳ ಆದ್ಯತೆಯನ್ನು ಎತ್ತಿತೋರಿಸುತ್ತದೆ. ಬಡವರ, ಶ್ರಮಿಕರ, ಜನ ಸಾಮಾನ್ಯರ ಬೇಡಿಕೆಗಳು ಇಲ್ಲಿನ ರಾಜಕಾರಣದಲ್ಲಿ ಆದ್ಯತೆಯಾಗಿ ಉಳಿದಿಲ್ಲ. ರೈತರ ಕೈಯಲ್ಲಿರುವ ಅಲ್ಪ ಸ್ವಲ್ಪ ಜಮೀನು ವಿವಿಧ ಕಸರತ್ತು ಗಳ ಮೂಲಕ ಅಗ್ಗದ ದರಕ್ಕೆ ರಿಯಲ್ ಎಸ್ಟೇಟ್ ಲಾಭಿಗಳ ಪಾಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನತೆ ತಮ್ಮ ಹಕ್ಕುಗಳಿಗಾಗಿ ಸಂಘಟಿರಾಗಬೇಕಿದೆ, ಮತ್ತೆ ಕೆಂಬಾವುಟ ಹಿಡಿದು ಹಕ್ಕುಗಳಿಗಾಗಿ ಧ್ವನಿ ಎತ್ತಬೇಕಿದೆ ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉಳ್ಳಾಲ ತಾಲೂಕು ರಚನೆಯಾಗಿ ೫ ವರ್ಷಗಳು ಕಳೆದರೂ, ತಾಲೂಕು ಕಚೇರಿ, ತಾಲೂಕು ಆಸ್ಪತ್ರೆ,ನ್ಯಾಯಾಲಯ, ಸಬ್ ರಿಜಿಸ್ಟಾರ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಉಳ್ಳಾಲ ತಾಲೂಕಿನ ಅವ್ಯವಸ್ಥೆಗಳ ಬೆಳಕು ಚೆಲ್ಲಿದರು.
ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್ ಜಾಥಾ ತಂಡವನ್ನು ಸ್ವಾಗತಿಸಿ ದರು. ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, ಕೃಷ್ಣಪ್ಪ ಸಾಲ್ಯಾನ್, ಜಯಂತ ನಾಯಕ್, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಶೇಖರ್ ಕುಂದರ್, ಪದ್ಮಾವತಿ ಶೆಟ್ಟಿ, ವಲಯ ಮುಖಂಡರಾದ ರಿಜ್ವನ್ ಹರೇಕಳ, ರಝಾಕ್ ಮುಡಿಪು, ರೋಹಿದಾಸ್ ಭಟ್ನಗರ, ಪ್ರಮೋದಿನಿ ಕಲ್ಲಾಪು, ಸುಂದರ ಕುಂಪಲ, ಇಬ್ರಾಹೀಂ ಅಂಬ್ಲಮೊಗರು, ಜನಾರ್ದನ ಕುತ್ತಾರ್, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.