ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅವಮಾನಿಸಿರುವುದು ಖಂಡನೀಯ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿ ರುವ ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿ ಅವಮಾನಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದರು, ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತುಂಡರಿಸಿರುವುದು ಹಿಂದೂಗಳ ಶ್ರದ್ದೆಯ ಮೇಲೆ ನಡೆದ ಆಕ್ರಮಣವಾಗಿದೆ ಎಂದು ಹೇಳಿದ್ದಾರೆ.
ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಸನಾತನ ಹಿಂದು ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ. ಸಿದ್ದರಾಮಯ್ಯ ಸರ್ಕಾರ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿರುವುದು ಅಕ್ಷಮ್ಯ. ಉದ್ದೇಶ ಪೂರ್ವಕವಾಗಿ ಮಾಡಲಾದ ಈ ಕೃತ್ಯ ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿದ್ದು, ಸರಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮುಸ್ಲಿಮರಿಗೆ ಮೀಸಲಾತಿ, ಜಾತಿ ಗಣತಿಯಲ್ಲಿಯೂ ತಾರತಮ್ಯ, ಜನಿವಾರದಂತಹ ಕೃತ್ಯಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸುತ್ತಿರುವುದು ಕೋಮುವಾದದ ಅತಿರೇಕದ ನಡೆಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಿ ಅನ್ಯಾಯ ಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.