ಜನಿವಾರ ಮುಟ್ಟಿದರೆ ಜಾಗೃತೆ: ಪುತ್ತೂರು ಶಾಸಕ ಅಶೋಕ್ ರೈ ಎಚ್ಚರಿಕೆ

ಅಶೋಕ್ ಕುಮಾರ್ ರೈ
ಪುತ್ತೂರು: ಜನಿವಾರ ವನ್ನು ಮುಟ್ಟುವ ಹಕ್ಕು ಯಾರಿಗೂ ಇಲ್ಲ. ಯಾವುದೇ ಅಧಿಕಾರಿಯು ಜನಿವಾರ ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದಲ್ಲಿ ನಮ್ಮ ಸರ್ಕಾರ ಸುಮ್ಮನೆ ಇರುವುದಿಲ್ಲ. ಜನಿವಾರ ಮುಟ್ಟಿದರೆ ಜಾಗೃತೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಇಟಿ ಪರೀಕ್ಷೆಯ ಸಂದರ್ಭ ಜನಿವಾರ ತೆಗೆಯಲು ಅಧಿಕಾರಿಗಳು ಸೂಚನೆ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಅಶೋಕ್ ರೈ ಅವರು ಜನಿವಾರ ಧರಿಸುವುದು ಒಂದು ಸಂಸ್ಕಾರ, ಅದಕ್ಕೆ ಯಾರೇ ಆಗಲಿ ಕೈ ಹಾಕುವುದು ಅಪರಾಧ. ಅವರವರ ನಂಬಿಕೆ, ಆಚಾರ, ವಿಚಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಧಿಕಾರಿಗಳು ಜನಿವಾರ ಕತ್ತರಿಸಿರುವುದು ಖಂಡನೀಯ ಕೃತ್ಯವಾಗಿದೆ ಎಂದು ಹೇಳಿದರು.
ಈ ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸುವಲ್ಲಿ ಬ್ರಾಹ್ಮಣ ಸಮಾಜ ನಮ್ಮ ಬೆನ್ನ ಹಿಂದೆ ನಿಂತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಅವರ ಪರವಾಗಿ ನಿಂತಿದೆ. ಇನ್ನು ಮುಂದೆ ಪರೀಕ್ಷೆ ಬರೆಯುವ ಯಾವ ವಿದ್ಯಾರ್ಥಿಗಳಿಗೂ ಅಧಿಕಾರಿಗಳು ಈ ರೀತಿ ಮಾಡುವಂತಿಲ್ಲ. ಆ ಸಮಾಜದ ಜೊತೆಗೆ ಸರ್ಕಾರ ಮತ್ತು ನಾವಿದ್ದೇವೆ ಎಂದು ತಿಳಿಸಿದ್ದಾರೆ.