ಕೀಳರಿಮೆ ದೂರ ಮಾಡಿ ಸಾಧಿಸಿ ತೋರಿಸಿ: ಯು.ಎಚ್.ಉಮರ್

Update: 2025-04-23 17:56 IST
ಕೀಳರಿಮೆ ದೂರ ಮಾಡಿ ಸಾಧಿಸಿ ತೋರಿಸಿ: ಯು.ಎಚ್.ಉಮರ್
  • whatsapp icon

ಮಂಗಳೂರು, ಎ.23: ಸಾಧನೆಗೆ ಯಾವುದೂ ಕೂಡ ಅಡ್ಡಿಯಾಗಬಾರದು. ಬದುಕಿನಲ್ಲಿ ಸಾಧಿಸುವ ಗುರಿಯೊಂದೇ ಮುಖ್ಯ. ಅನ್ಷಕರಸ್ಥ ಕೂಡ ತನ್ನದೇ ಆದ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ ಉದಾಹರಣೆ ಇದೆ. ಸಾಧಿಸುವ ಮೊದಲು ತನ್ನಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಸ್ಪಷ್ಟ ಗುರಿಯೊಂದಿಗೆ ಕೀಳರಿಮೆ ದೂರ ಮಾಡಿ ಸಾಧಿಸಿ ತೋರಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಯು.ಎಚ್. ಉಮರ್ ಹೇಳಿದರು.

ನಗರದ ಕೂಳೂರಿನಲ್ಲಿರುವ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ಕನ್ನಡ ಕಾದಂಬರಿಯ ಬ್ಯಾರಿ ಅನುವಾದಿತ ‘ಯತೀಮ್’ಕೃತಿಯನ್ನು ಕಾಲೇಜಿನ ವೈ.ಎಂ.ಕೆ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾಷೆಯು ಕೇವಲ ಸಂವಹನ ಕಲೆಯಲ್ಲ. ಅದರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂವೇದನೆ ಇರುತ್ತದೆ. ಈ ನಿಟ್ಟಿನಲ್ಲೂ ಅಧ್ಯಯನ ಆಗಬೇಕಿದೆ. ಬ್ಯಾರಿ ಅಕಾಡಮಿಯು ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಲಿದೆ ಎಂದು ಯು.ಎಚ್.ಉಮರ್ ಹೇಳಿದರು.

ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ನ ‘ಮಾರ್ದನಿ’ ಕನ್ನಡ ಜರ್ನಲ್ ವೆಬ್‌ಸೈಟ್ನ್ನು ಉಜಿರೆ ಎಸ್‌ಡಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಜಾಲತಾಣಗಳು ಸಮಾಜಕ್ಕೆ ಸ್ಪಂದಿ ಸುವ ಅಗತ್ಯವಿದೆ. ಜಾಲತಾಣಗಳಲ್ಲಿ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಲೇಖನಗಳಿಗೆ ಆದ್ಯತೆ ನೀಡಬೇಕು ಎಂದರು.

ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ನ ಪ್ರಾಂಶುಪಾಲ ಡಾ. ಅರುಣ್ ಎ. ಭಾಗವತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕೃತಿಯ ಅನುವಾದಕ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅಭಿಮತ ಟಿ.ವಿ. ಚಾನೆಲ್‌ನ ಮುಖ್ಯಸ್ಥೆ ಮಮತಾ ಪಿ. ಶೆಟ್ಟಿ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಭಾಗವಹಿಸಿ ಮಾತನಾಡಿದರು. ಉಪ ಪ್ರಾಂಶುಪಾಲೆ ಡಾ. ಶರೀನಾ ಪಿ., ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ ಸಿಕ್ವೇರಾ ಮಾತ ನಾಡಿದರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ದಿನಕರ ಪಚ್ಚನಾಡಿ ‘ಮಾರ್ದನಿ’ಯ ಬಗ್ಗೆ ಮಾಹಿತಿ ನೀಡಿದರು.

ಉಪ ಪ್ರಾಂಶುಪಾಲರಾದ ಡಾ. ಜೀವನ್‌ರಾಜ್, ನಾರಾಯಣ ಸುಕುಮಾರ ಎ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಲ್ವಿತ್ ಅಹ್ಮದ್ ಪ್ರಾರ್ಥಿಸಿದರು. ಕೃತಿಯ ಲೇಖಕ ನಿಯಾಝ್ ಪಡೀಲ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿಯರಾದ ರಝೀನಾ ವಂದಿಸಿದರು. ಶಹ್ಲಾ ಅಬ್ದುಲ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News