ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ತೀವ್ರ ಖಂಡನೀಯ: ಇನಾಯತ್ ಅಲಿ

ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಹಾಗೆಯೇ ಮೃತರ ಆತ್ಮಕ್ಕೆ ಶಾಂತಿಕೋರುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ನಾವು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇವೆ. ಘಟನೆ ನಡೆದ ಕ್ಷಣದಿಂದ ನಮ್ಮ ಮನಸ್ಸಿನಲ್ಲಿ ಸಹಿಸಲಸಾಧ್ಯವಾದ ನೋವು ಕಾಡುತ್ತಿದೆ. "ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯೇ ಈ ಪ್ರಪಂಚದಲ್ಲಿ ?" ಎನ್ನುವ ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಇಲ್ಲಿ ನಮಗೆ ನೆನಪಾಗುತ್ತಿವೆ.
ಇದೊಂದು ಮಾನವೀಯತೆ ವಿರುದ್ಧದ ಯುದ್ಧ. ಯಾವುದೇ ಧರ್ಮವಾಗಲಿ ಹಿಂಸೆ, ಕ್ರೂರತೆ, ಕೊಲ್ಲುವುದನ್ನು ಬೆಂಬಲಿಸುವುದಿಲ್ಲ. ದ್ವೇಷದ ಗೋಡೆ ಕಟ್ಟುವ ಬದಲು ತಿಳುವಳಿಕೆಯ ಸೇತುವೆ ಕಟ್ಟಲು ಪ್ರೇರೇಪಿಸುತ್ತದೆ. ದ್ವೇಷ ಮೆರೆಯುವ ಇಂತಹ ಭಯೋತ್ಪಾದಕರು, ಹಾಗೂ ಭಯೋತ್ಪಾದನೆಗೆ ಯಾವುದೇ ಜಾತಿ, ಧರ್ಮವೇ ಇಲ್ಲ. ದ್ವೇಷ ಬಿತ್ತುವ ಇಂತಹ ಶಕ್ತಿಯ ವಿರುದ್ಧ ನಾವು ಮಾನವೀಯ ಮೌಲ್ಯಗಳೊಂದಿಗೆ ಸಂಘಟಿತರಾಗಿ ಹೋರಾಡಬೇಕು.
ಈ ದಾಳಿಯ ಉದ್ದೇಶ ಭೀತಿ, ದ್ವೇಷ ಹುಟ್ಟಿಸುವುದು, ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿಸುವುದನ್ನು ಬಿಟ್ಟು ಬೇರೇನೂ ಅಲ್ಲ. "ಮನುಷ್ಯ ಜಾತಿ ತಾನೊಂದೆ ವಲಂ" ಎನ್ನುವ ಆದಿಕವಿ ಪಂಪನ ಮಾತುಗಳನ್ನು ಸ್ಮರಿಸುತ್ತಾ ಈ ಕ್ರೂರ ದಾಳಿಯಲ್ಲಿ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುವುದಾಗಿ ಇನಾಯತ್ ಅಲಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.