ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫಾರಂನಿಂದ ಶೀಘ್ರದಲ್ಲೇ ಡಿ ಅಡಿಕ್ಷನ್ ಸೆಂಟರ್: ಜಿ.ಎ.ಬಾವ

ಮಂಗಳೂರು, ಎ.23: ಮಾದಕ ಪದಾರ್ಥಗಳ ಸೇವೆನೆಯ ವ್ಯಸನಿಯಾರುವ ಯುವ ಜನರನ್ನು ಪಾರು ಮಾಡಲು ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫಾರಂ ಶೀಘ್ರದಲ್ಲಿ ಮಂಗಳೂರಿನಲ್ಲಿ ಡಿ ಅಡಿಕ್ಷನ್ ಸೆಂಟರ್‌ನ್ನು ಆರಂಭಿಸಲಿದೆ ಎಂದು ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫಾರಂ ಅಧ್ಯಕ್ಷ ಹಾಗೂ ನಿವೃತ್ತ ಡಿಸಿಪಿ ಜಿ.ಎ ಬಾವ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುವ ಜನರು ಅಮಲು ಪದಾರ್ಥಗಳ ಸೇವೆನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಬ್ಯಾರಿ ಸಮುದಾಯದ ಯುವಕರು ಡ್ರಗ್ಸ್ ಸೇವೆಯ ಚಟಕ್ಕೆ ಬಿದ್ದಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಯುವಜನತೆಯನ್ನು ಡ್ರಗ್ಸ್ ಸೇವೆನೆ ಚಟದಿಂದ ಮುಕ್ತಗೊಳಿಸಲು ಡಿ ಅಡಿಕ್ಷನ್ ಸೆಂಟರ್‌ನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಅಮಲು ಪದಾರ್ಥ ಸೇವೆನೆಯ ಚಟಕ್ಕೆ ಬಿದ್ದವರನ್ನು ಪಾರು ಮಾಡಲು ಮತ್ತು ಪುನರ್ವಸತಿ ಕಲ್ಪಿಸಲು ಕ್ರೈಸ್ತ ಸಮುದಾಯದಿಂದ ಮೂರು ಡಿ ಅಡಿಕ್ಷನ್ ಸೆಂಟರ್ ಈಗಾಗಲೇ ಕಾರ್ಯಾಚರಿಸುತ್ತಿದೆ. ಬ್ಯಾರಿ ಮುಸ್ಲಿಂ ಸಮುದಾಯದಿಂದ ಇಂತಹ ಮೊದಲ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಡಿ ಅಡಿಕ್ಷನ್ ಸೆಂಟರ್ ಸ್ಥಾಪನೆ ಮತ್ತು ಮುಂದಿನ ಯೋಜನೆಗಳ ಚರ್ಚಿಸಲು ಮೇ 13 ರಂದು ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫಾರಂನ ಸಭೆ ಕರೆಯಲಾಗುವುದು ಎಮದು ಮಾಹಿತಿ ನೀಡಿದರು.
ಉದ್ಯೋಗ ಮಾಹಿತಿ ಕೇಂದ್ರ: ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಎ.19 ಮತ್ತು 20ರಂದು ಆಯೋಜಿಸಿದ ‘ಬ್ಯಾರಿ ಸೌಹಾರ್ದ ಉತ್ಸವ’ ಯಶಸ್ವಿಯಾಗಿ ಸಮಾಪ್ತಿಗೊಂಡಿದ್ದು, ಈ ಸಂದರ್ಭದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 3,500ಕ್ಕೂ ಅಧಿಕ ಮಂದಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ದೇಶ ವಿದೇಶಗಳ 128 ಕಂಪೆನಿಗಳು ಪಾಲ್ಗೊಂಡಿದ್ದವು, ಸ್ಥಳದಲ್ಲೇ 124 ಮಂದಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 425 ಮಂದಿ ಸಂದರ್ಶನದ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಮುಂದೆ ಸಂಘಟನೆಯ ವತಿಯಿಂದ ಉದ್ಯೋಗ ಮಾಹಿತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಡೆದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಮೇಳದಲ್ಲಿ 1,200 ಮಂದಿ ಭಾಗವಹಿಸಿದ್ದರು. 518 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಗಿದೆ ಎಂದರು.
ಸಾಂಸ್ಕೃತಿ ಕಾರ್ಯಕ್ರಮದ ಭಾಗವಾಗಿ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಸದಸ್ಯರು, ಪುರುಷರಿಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿತ್ತು. ‘ಖಡಕ್’ ಎಂಬ ಹೆಸರಿನ ಪುರುಷರ ಕವಿಗೋಷ್ಠಿ, ಹದಿನಾಲ್ಕು ವರ್ಷದೊಳಗಿನ ಮಕ್ಕಳ ನೃತ್ಯ ಸಂಗೀತ ಕಾರ್ಯಕ್ರಮ ಹಾಗೂ ಕ್ವಿಜ್ ಸ್ಪರ್ಧೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಸ್ಕೃತಿಯ ಭಾಗವಾಗಿ ‘ಪಾಟ್ ಲೇಸ್’ ಹೆಸರಿನ ಮಹಿಳಾ ಬಹುಭಾಷಾ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಕೊಡಗು ಜಿಲ್ಲೆಯ ಕವಯತ್ರಿಯರು ಭಾಗವಹಿಸಿದ್ದರು. ಮಹಿಳೆಯರ ವಿಚಾರಗೋಷ್ಠಿ ಮೆಚ್ಚುಗೆ ಗಳಿಸಿತು. ಬ್ಯಾರಿ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ದಫ್ , ಒಪ್ಪನ ಪಾಟ್’ ಕಾರ್ಯಕ್ರಮಗಳನ್ನು ವಿವಿಧ ತಂಡಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದವು.ಇಷ್ಟಲ್ಲದೇ ಬ್ಯಾರಿ ಜನಾಂಗದ ಹಲವು ಪ್ರತಿಭೆಗಳನ್ನು ಗುರುತಿಸಿ.ವಿವಿಧ ರಂಗಗಳ ಸಾಧಕರಿಗೆ ಪ್ರಶಸ್ತಿ, ಲಕ್ಷದ್ವೀಪ ತಂಡದಿಂದ ಲಿರಾರ್ ಸಂಗೀತ ಹಾಗೂ ಕೇರಳ ತಂಡದಿಂದ ಮಾಪಿಳ್ಳಾ ಪಾಟ್ ವೈಭವದಿಂದ ನಡೆಯಿತು ಎಂದು ವಿವರಿಸಿದರು.
ಖಂಡನೆ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಕಂಡನೀಯ. ಭಾರತದ ಭಾವಕ್ಯದ ಮೇಲೆ ಆಗಿರುವ ದಾಳಿ ಇದಾಗಿದೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಸೀಮಾ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಯು.ಟಿ. ಝುಲ್ಫೀಕರ್ ಅಲಿ, ‘ಬ್ಯಾರಿ ಸೌಹಾರ್ದ ಉತ್ಸವ’ದ ಸಂಘಟಕರಾದ ಯು.ಟಿ. ಫರ್ಝಾನ, ಹನೀಫ್ ಪುತ್ತೂರು, ಇಕ್ಬಾಲ್ ಪರ್ಲಿಯಾ , ಅಸ್ಮತ್ ವಗ್ಗ ಉಪಸ್ಥಿತರಿದ್ದರು.