ಅಪಘಾತದಲ್ಲಿ ಮಹಿಳೆ ಮೃತ್ಯು: ಆರೋಪಿ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಮಂಗಳೂರು, ಎ.23: ಐದು ವರ್ಷದ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಮಹಿಳೆಯ ಸಾವಿಗೆ ಕಾರಣ ಎನ್ನಲಾದ ಆರೋಪಿ ಚಾಲಕನಿಗೆ ಜೆಎಂಎಫ್‌ಸಿ 3ನೆ ನ್ಯಾಯಾಲಯವು 9 ತಿಂಗಳ ಜೈಲು ಶಿಕ್ಷೆ ಮತ್ತು 9 ಸಾವಿರ ರೂ. ದಂಡ ವಿಧಿಸಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಲ್ ಗ್ರಾಮದ ಸಿದ್ದಲಿಂಗನ ಗೌಡ (29) ಶಿಕ್ಷೆಗೊಳಗಾದ ಆರೋಪಿ ಚಾಲಕ.
*ಘಟನೆಯ ವಿವರ: 2019ರ ಡಿಸೆಂಬರ್ 1ರಂದು ಮಧ್ಯಾಹ್ನ ನಗರದ ಕದ್ರಿ ಕಂಬಳ ಎಂಬಲ್ಲಿ ವಿನೋದ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಸಿದ್ದಲಿಂಗನ ಗೌಡ ಚಲಾಯಿಸುತ್ತಿದ್ದ ಈಚರ್ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿತ್ತು. ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶೈಲಜಾ ರಾವ್ (55) ಎಂಬವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ರಿಕ್ಷಾ ಚಾಲಕ ವಿನೋದ್‌ಗೂ ಗಂಭೀರ ಗಾಯವಾಗಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸುರೇಶ್ ಇ.ಎಸ್.ಅವರು ಮಂಗಳವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂಚಾರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಜಾರ್ಜ್‌ಶೀಟ್ ಸಲ್ಲಿಸಿದ್ದರು. ಸಂಜೀವ ಎಪಿ ಮತ್ತು ತಸ್ಲೀಂ ಆರೀಫ್ ಜೆ. ಸಹಕರಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕಿ ನೇತ್ರಾವತಿ ಮತ್ತು ಗೀತಾ ರೈ ವಾದಿಸಿದ್ದರು.