ತೆಕ್ಕಾರು: ಎರಡು ಮನೆಗಳಿಗೆ ನುಗ್ಗಿ ನಗ- ನಗದು ಕಳವು

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದಲ್ಲಿನ ಎರಡು ಮನೆಗಳಿಗೆ ನುಗ್ಗಿದ ಕಳ್ಳ ಮನೆ ಯೊಂದರಿಂದ ಲಕ್ಷಾಂತರ ರೂ. ಬೆಲೆಬಾಳುವ ನಗ ನಗದನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮನೆಯಲ್ಲಿ ಮನೆ ಮಂದಿ ಮಲಗಿದ್ದಾಗಲೇ ಮನೆಗೆ ನುಗ್ಗಿರುವುದು ಈ ಕಳವು ಪ್ರಕರಣದಲ್ಲಿ ಕಂಡು ಬಂದಿರುವ ವಿಶೇಷತೆಯಾಗಿದೆ. ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಎಂಬವರ ಮನೆಯಲ್ಲಿ ಅವರ ಪತ್ನಿ ಮತ್ತು ನಾದಿನಿ ಮಲಗಿದ್ದಾಗಲೇ ಮನೆಯೊಳಗೆ ನುಗ್ಗಿದ ಕಳ್ಳ ನಾದಿನಿಯ ವ್ಯಾನಿಟಿ ಬ್ಯಾಗಿನಲ್ಲಿರಿಸ ಲಾದ 12 ಗ್ರಾಮ್ ತೂಕದ ಚಿನ್ನದ ಬಳೆ , ಒಟ್ಟು 12 ಗ್ರಾಮ್ ತೂಕವಿರುವ 3 ಉಂಗುರ ಹಾಗೂ ಒಟ್ಟು 6 ಗ್ರಾಮ್ ತೂಕವಿರುವ 4 ಉಂಗುರ, ಮತ್ತು 3 ಸಾವಿರ ನಗದು ಹಣವನ್ನು ದೋಚಿದ್ದು, ಬ್ಯಾಗನ್ನು ಮನೆ ಸಮೀಪದ ಕೋಳಿ ಅಂಗಡಿಯ ಹಿಂಭಾಗಕ್ಕೆ ಎಸೆದು ಪರಾರಿಯಾಗಿದ್ದಾನೆ.
ಇದೇ ಗ್ರಾಮದ ಕೋಡಿ ಮನೆ ನಿವಾಸಿ ಅನ್ವರ್ ಎಂಬವರ ಮನೆಗೂ ಮನೆ ಮಂದಿ ಮಗಲಿದ್ದಾಗಲೇ ನುಗ್ಗಿದ ಕಳ್ಳ ಮನೆಯೊಳಗಿನ ಕಪಾಟನ್ನು ಜಾಲಾಡಿದ್ದಲ್ಲದೆ, ಕಪಾಟಿನಲ್ಲಿದ್ದ ನಗದು ಹಣವನ್ನು ಜೇಬಿಗೆ ತುಂಬಿಸುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದನೆನ್ನಾಲಾಗಿದೆ. ಮನೆಯ ಯಜಮಾನಿ ನೀರು ಕುಡಿಯ ಲೆಂದು ಎದ್ದಾಗ ಕಳ್ಳ ಓಡಿ ತಪ್ಪಿಸಿಕೊಂಡಿದ್ದ. ಈ ಕಾರಣದಿಂದಾಗಿ ಅನ್ವರ್ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದ್ದರೂ ಯಾವುದೇ ವಸ್ತು ಕಳವಿಗೀಡಾಗಿಲ್ಲ ಎಂದು ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ನಡೆಸುತ್ತಿದ್ದಾರೆ.